
ಮಾರ್ಚ್ 15ರ ಒಳಗೆ ಸೇನಾ ಸಿಬ್ಬಂದಿ ವಾಪಸ್ ಕರೆಸಿಕೊಳ್ಳಿ: ಭಾರತಕ್ಕೆ ಮಾಲ್ಡೀವ್ಸ್ ಡೆಡ್‌ಲೈನ್
ಚೀನಾ ಅಧ್ಯಕ್ಷರನ್ನು ಭೇಟಿ ಮಾಡಿದ ಬಳಿಕ ಮಾಲ್ಡೀವ್ಸ್‌ಗೆ ಹಿಂದಿರುಗಿದ ಕೂಡಲೇ ಅಲ್ಲಿನ ಅಧ್ಯಕ್ಷ ಮೊಹಮ್ಮದ್ ಮುಯಿಝು ಭಾರತದ ಸೇನಾ ಸಿಬ್ಬಂದಿಯನ್ನು ತನ್ನ ದೇಶದಿಂದ ವಾಪಸ್ ಹೋಗುವಂತೆ ಮಾರ್ಚ್ 15 ರ ಡೆಡ್‌ಲೈನ್ ಕೊಟ್ಟಿದ್ದಾರೆ!
ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಈ ಆದೇಶ ನೀಡಿದ್ದು, ದ್ವೀಪ ರಾಷ್ಟ್ರದಲ್ಲಿ ಇರುವ ಭಾರತೀಯ ಸೇನಾ ಸಿಬ್ಬಂದಿ ಮಾರ್ಚ್ 15ರ ಒಳಗೆ ಮಾಲ್ಡೀವ್ಸ್ ದೇಶದಲ್ಲಿ ಇರುವ ತಮ್ಮ ನೆಲೆಗಳನ್ನು ತೊರೆದು ಭಾರತಕ್ಕೆ ವಾಪಸ್ ಹೋಗಬೇಕು ಎಂದು ಹೇಳಿದ್ದಾರೆ. ಚೀನಾಗೆ ಭೇಟಿ ನೀಡಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಿ ಮಾಲ್ಡೀವ್ಸ್ ರಾಜಧಾನಿ ಮಾಲೆಗೆ ವಾಪಸ್ ಆದ ಕೆಲವೇ ದಿನಕ್ಕೆ ಈ ಆದೇಶ ಹೊರಡಿಸಿದ್ದಾರೆ.
ಮಾಲ್ಡೀವ್ಸ್ ಅಧ್ಯಕ್ಷರಾಗಿ ಆಯ್ಕೆ ಆದ ಬಳಿಕ ಮೊದಲ ಬಾರಿಗೆ ಚೀನಾಗೆ ಭೇಟಿ ನೀಡಿದ್ದ ಮೊಹಮ್ಮದ್ ಮುಯಿಝು ಆರಂಭದಿಂದಲೇ ಭಾರತ ವಿರೋಧಿ ಹಾಗೂ ಚೀನಾ ಪರವಾದ ನಿಲುವುಗಳನ್ನು ಬಿಂಬಿಸುತ್ತಿದ್ದರು. ಅಧ್ಯಕ್ಷರಾಗಿ ಆಯ್ಕೆ ಆದ ಬಳಿಕ ನೇರಾನೇರ ಭಾರತದ ವಿರುದ್ಧ ಮುಗಿಬಿದ್ದಿರುವ ಮೊಹಮ್ಮದ್ ಮುಯಿಝು, ತಮ್ಮ ಸರ್ಕಾರದ ಅಧ್ಯಕ್ಷೀಯ ಕಚೇರಿ ಕಾರ್ಯದರ್ಶಿ ಅಬ್ದುಲ್ಲಾ ನಜೀಮ್ ಮೂಲಕ ಹೇಳಿಕೆ ಪ್ರಕಟಿಸಿದ್ದಾರೆ.




