Crime

ಖಾಸಗಿ ಬೋರವೆಲ್ ಬಾಡಿಗೆ ಆಧಾರದಲ್ಲಿ ಒಪ್ಪಂದ ಮಾಡಿಕೊಳ್ಳಿ: ಸಚಿವ ಎಂಬಿಪಿ ನಿರ್ದೇಶನ

ವಿಜಯಪುರ : ವಿವಿಧ ವಾರ್ಡ್ಗಳಲ್ಲಿರುವ ಖಾಸಗಿ ಬೋರವೆಲ್ಗಳನ್ನು ಗುರುತಿಸಿ ಬಾಡಿಗೆ ಆಧಾರದಲ್ಲಿ ಒಪ್ಪಂದ ಮಾಡಿಕೊಳ್ಳುವುದು ಹಾಗೂ ಸ್ವಚ್ಛಗೊಂಡಿರುವ ಪುರಾತನ ಬಾವಿಗಳ ನೀರನ್ನು ಗೃಹಪಯೋಗಿ ಕಾರ್ಯಗಳಿಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಪಾಲಿಕೆ ಕಾರ್ಯಯೋಜನೆ ರೂಪಿಸಿ ತುರ್ತು ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ನಿರ್ದೇಶನ ನೀಡಿದರು.
ವಿಜಯಪುರ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ವಿಷಯದ ಕುರಿತು ನಿರ್ದೇಶನ ನೀಡಿದ ಸಚಿವರು, ವಿಜಯಪುರ ನಗರದಲ್ಲಿ ಐತಿಹಾಸಿಕ ತಾಜ್ ಬಾವಡಿ ಸೇರಿದಂತೆ ಅನೇಕ ಪುರಾತನ ಬಾವಿಗಳನ್ನು ಸ್ವಚ್ಛಗೊಳಿಸಲಾಗಿದೆ, ಈ ಎಲ್ಲ ಬಾವಡಿಗಳ ನೀರನ್ನು ಕುಡಿಯುವ ನೀರು ಹೊರತುಪಡಿಸಿ ಸ್ನಾನ, ಬಟ್ಟೆ ಒಗೆಯಲು ಬಳಸಬಹುದಾಗಿದೆ, ಸರಿಸುಮಾರು 5 ಎಂಎಲ್ಡಿಯಷ್ಟು ನೀರು ಸದ್ಭಳಕೆ ಮಾಡಿಕೊಳ್ಳಬಹುದಾಗಿದ್ದು, ಭೂತನಾಳ ಕೆರೆ ಜಲಮೂಲದ ಹೊರೆಯನ್ನು ಸಂಪೂರ್ಣವಾಗಿ ತಗ್ಗಿಸಬಹುದಾಗಿದೆ, ಈ ನಿಟ್ಟಿನಲ್ಲಿ ಪಾಲಿಕೆ ಮುಂದಾಗಬೇಕು ಎಂದರು.

ಜಿಲ್ಲಾಧಿಕಾರಿಗಳ ಪಿ.ಡಿ. ಹಣದಲ್ಲಿರುವ ಅನುದಾನವನ್ನು ವಿಜಯಪುರ ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಬಳಸಿಕೊಳ್ಳುವ ಅವಕಾಶವಿದೆ, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಡನೆಯೂ ಚರ್ಚೆ ಮಾಡಿರುವೆ, ಪಾಲಿಕೆ ಅಧಿಕಾರಿಗಳು ಕೂಡಲೇ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ವಹಿಸಿ ಎಂದರು.

ಖಾಸಗಿ ಬೋರವೆಲ್ಗಳನ್ನು ಸಹ ನೀರು ಪೂರೈಕೆಯ ಮಾಧ್ಯಮಗಳಾಗಿ ಬಳಸಿಕೊಳ್ಳಬಹುದಾಗಿದೆ, ಆಯಾ ವಾರ್ಡ್ ಸದಸ್ಯರು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಖಾಸಗಿ ಬೋರವೆಲ್ಗಳನ್ನು ಗುರುತಿಸಿ ಬಾಡಿಗೆ ಒಪ್ಪಂದದ ಆಧಾರದ ಮೇಲೆ ಕುಡಿಯುವ ನೀರಿಗೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಭೂತನಾಳ ಕೆರೆಗೆ ತಿಡಗುಂದಿ ಅಕ್ವಾಡೆಕ್ಟ್ ಮೂಲಕ ನೀರು ತುಂಬಿಸುವ ಕಾರ್ಯ ಕೈಗೊಳ್ಳಲಾಗುವುದು, ಈಗಾಗಲೇ ಈ ಯೋಜನೆಗೆ 7.5 ಕೋಟಿ ರೂ. ಖರ್ಚಾಗಲಿದ್ದು, ಮೂರುವರೆ ಕೊಟಿ ರೂ. ಹಣ ಪಾಲಿಕೆ ವತಿಯಿಂದ ಕೈಗೊಳ್ಳಲಾಗುವುದು ಎಂದರು.

ಪಾಲಿಕೆ ಸದಸ್ಯ ಅಶೋಕ ನ್ಯಾಮಗೌಡ, ಈ ಹಿಂದೆ ಪಿವಿಸಿ ಪೈಪ್ ಕುಡಿಯುವ ನೀರಿನ ಪೈಪಲೈನ್ ವ್ಯವಸ್ಥೆಗೆ ಪುರಾತನ ತಾಜ್ಬಾವಡಿ, ಚಂದಾಬಾವಡಿ ಮೊದಲಾದವುಗಳ ಸಂಪರ್ಕ ಕಲ್ಪಿಸಿದರೆ ಅನುಕೂಲವಾಗುತ್ತದೆ ಎಂದರು.

ಬಡ್ಡಿದರ ಆಕರಣೆ ಮಂಗಳೂರು ಮಾದರಿ ಅನುಸರಿಸಿ*
ಪಾಲಿಕೆ ಆಸ್ತಿ ಕರ, ಘರ್ ಪಟ್ಟಿ ಮೊದಲಾದವುಗಳಿಗೆ ಬಡ್ಡಿ ಆಕರಣೆ ವಿಷಯವಾಗಿ ಶೇ.250 ಕ್ಕೂ ಹೆಚ್ಚು ಬಡ್ಡಿಪ್ರಮಾಣ ವಿಧಿಸಲಾಗುತ್ತಿದೆ, ಇದು ಜನರಿಗೆ ಅತ್ಯಂತ ಹೊರೆಯಾಗುತ್ತಿದ್ದು, ಈ ಮಾದರಿಯ ಸಮಸ್ಯೆ ಎದುರಾದಾಗ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ತೆರಿಗೆ ಪರಿಷ್ಕರಣೆ ಮಾಡಲಾಗಿದೆ, ಈ ಮಾದರಿಯಲ್ಲಿ ವಿಜಯಪುರ ಮಹಾನಗರ ಪಾಲಿಕೆಯಲ್ಲಿಯೂ ತೆರಿಗೆ ಪರಿಷ್ಕರಣೆ ಮಾಡಬೇಕು, ಕೂಡಲೇ ಈ ಹೊರೆಯನ್ನು ಕಡಿಮೆ ಮಾಡಿ ಎಂದು ಸದಸ್ಯ ರಾಜಶೇಖರ ಮಗಿಮಠ ಪ್ರಮುಖವಾದ ವಿಷಯವನ್ನು ಸಭೆಯ ಗಮನಕ್ಕೆ ತಂದರು. ಇದೊಂದು ಗಂಭೀರವಾದ ಸಮಸ್ಯೆಯಾಗಿದ್ದು, ಈ ಬಗ್ಗೆಯೇ ವಿಶೇಷ ಸಾಮಾನ್ಯ ಸಭೆ ಕರೆಯಿರಿ ಎಂದು ಒತ್ತಾಯಿಸಿದರು.

ಮಹಾನಗರ ಪಾಲಿಕೆ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ, ಪಾಲಿಕೆ ಕಾರ್ಮಿಕರಿಗೂ ದುಡ್ಡು ಕೊಡಲು ಹಣವಿಲ್ಲ, ಹೀಗಾಗಿ ತುರ್ತು ಪರಿಹಾರ ನಿಧಿಯಾಗಿ 100 ಕೋಟಿ ರೂ. ಹಣವಾದರೂ ಕೊಡಿ ಎಂದು ಮಗಿಮಠ ಮನವಿ ಮಾಡಿಕೊಂಡರು. 24*7 ಯೋಜನೆ ಪೂರ್ವದಲ್ಲಿ 10 ದಿನಕ್ಕೊಮ್ಮೆ ನೀರು ಬರುತ್ತಿತ್ತು, ಈಗ ನೂರಾರು ಕೋಟಿ ರೂ. ಖರ್ಚು ಮಾಡಿ ಕುಡಿಯುವ ನೀರಿನ ಯೋಜನೆ ಮಾಡಿಯಾದರೂ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಜೈನ ಕಂಪನಿ ಇನ್ನೂ ಅನೇಕ ಕಡೆ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ, ಹೀಗಾಗಿ ಎಲ್ಲ ವರ್ಕ್ ಕಂಪ್ಲೀಟ್ ಆಗಿ ಅದು ಪರಿಶೀಲನೆಯಾದ ನಂತರವೇ ಅವರಿಗೆ ಹಸ್ತಾಂತರ ಮಾಡಬೇಕು ಎಂದು ಸಲಹೆ ನೀಡಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button