
ದೇವಲ ಗಾಣಗಾಪೂರದಲ್ಲಿ “ಸ್ವಚ್ಛ ಸಂಕೀರ್ಣ” ಉದ್ಘಾಟನೆ: ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಮತ್ತು ಪರಿಸರ ಕಾಪಾಡುವ ನಿಟ್ಟಿನಲ್ಲಿ ಹೊಸ ಅಧ್ಯಾಯ -ಡಾ.ಆಕಾಶ್ ಶಂಕರ
ಕಲಬುರಗಿ.ಅ.2:- ಗ್ರಾಮಗಳನ್ನು ಸ್ವಚ್ಛ ಮತ್ತು ಸುಂದರವನ್ನಾಗಿಸುವ ಹಾಗೂ ಆರೋಗ್ಯಕರ ಮತ್ತು ತ್ಯಾಜ್ಯ ಮುಕ್ತವಾಗಿಸುವ ನಿಟ್ಟಿನಲ್ಲಿ ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ಶ್ರೀ ದತ್ತಾತ್ರೇಯನ ಕ್ಷೇತ್ರವಾದ ದೇವಲ ಗಾಣಗಾಪೂರದಲ್ಲಿ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕಗಳ “ಸ್ವಚ್ಛ ಸಂಕೀರ್ಣ” ಸ್ಥಾಪಿಸಿರುವುದು ಗ್ರಾಮದಲ್ಲಿ ಸ್ವಚ್ಛತೆ ಮತ್ತು ಪರಿಸರ ಕಾಪಾಡಲು ಹೊಸ ಅಧ್ಯಾಯ ನಿರ್ಮಿಸಿದಂತಾಗಿದೆ ಎಂದು ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಡಾ. ಆಕಾಶ ಶಂಕರ ಹೇಳಿದರು.
ಶುಕ್ರವಾರ ಅಫಜಲಪೂರ ತಾಲೂಕಿನ ದೇವಲ ಗಾಣಗಾಪೂರದಲ್ಲಿ ಜಿಲ್ಲಾ ಪಂಚಾಯತಿಯಿಂದ ಸ್ವಚ್ಛೋತ್ಸವ ನಿತ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ “ಸ್ವಚ್ಛ ಸಂಕೀರ್ಣ” ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕದ ಏಕರೂಪ ಬ್ರ್ಯಾಂಡಿಂಗ್ ಲೋಕಾರ್ಪಣೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಚ್ಛತೆಯ ಪ್ರತೀಕವಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ದಿನದಂದೇ ಸ್ವಚ್ಛ ಸಂಕೀರ್ಣ ಕಟ್ಟಡ ಉದ್ಘಾಟಿಸಿರುವುದು ಸಂತಸ ತಂದಿದೆ. ಹಿಂದುಳಿದ ಈ ಜಿಲ್ಲೆಯಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿ, ಸ್ವಚ್ಛತೆ, ಪರಿಸರ ಕಾಳಜಿ, ಶೌಚಾಲಯ ಬಳಕೆಯಲ್ಲಿ ಹಿಂದಿದ್ದು, ಘಟಕ ಸ್ಥಾಪನೆಯಿಂದ ಇವುಗಳ ಬಗ್ಗೆ ಹೆಚ್ಚಿನ ಅರಿವು ಜನರಲ್ಲಿ ಮೂಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳು ಹಾಗೂ ಸ್ವಚ್ಛ ಭಾರತ್ ಮಿಷನ್(ಗ್ರಾ) ನೋಡಲ್ ಅಧಿಕಾರಿ ಎಂ.ಡಿ.ಇಸ್ಮಾಯಿಲ್ ಮಾತನಾಡಿ ಗ್ರಾಮಗಳಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗಾಗಿ ಜಿಲ್ಲೆಯಲ್ಲಿಯೆ ಉತ್ತಮ ಸೌಲಭ್ಯವುಳ್ಳ ಮತ್ತು ಮಾದರಿಯಾದ “ಸ್ವಚ್ಛ ಸಂಕೀರ್ಣ” ಇಂದು ಗ್ರಾಮಸ್ಥರಿಗೆ ಸಮರ್ಪಿಸಲಾಗಿದೆ. ಮನೆಯಲ್ಲಿ ಕಸ ವಿಂಗಡನೆ ಮಾಡಲು ಪ್ರತಿ ಮನೆಗೆ ಹಸಿ ಮತ್ತು ಒಣ ಕಸಗಾಗಿ ಎರಡು ಕಸದ ಡಬ್ಬಿಗಳನ್ನು ನೀಡಲಾಗುತ್ತದೆ. ಪ್ರತಿ ದಿನ ಸ್ವಚ್ಛತಾ ವಾಹಿನಿಯೊಂದಿಗೆ ಸಿಬ್ಬಂದಿಗಳು ಮನೆ-ಮನೆಗೆ ಕಸ ಸಂಗ್ರಹಣೆಗೆ ಬರಲಿದ್ದು, ಸಾರ್ವಜನಿಕರು ಒಣ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿರಿಸಿ ಸಿಬ್ಬಂದಿಗಳಿಗೆ ನೀಡುವ ಮೂಲಕ ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಆರೋಗ್ಯವೇ ಭಾಗ್ಯ ಎಂಬುದನ್ನು ಎಲ್ಲರು ಮನಗಾಣಬೇಕಿದೆ. ಗ್ರಾಮದ ಮನೆಗಳಿಂದ ಸಂಗ್ರಹಿಸುವ ಕಸವನ್ನು ಸ್ವಚ್ಛ ಸಂಕೀರ್ಣದಲ್ಲಿ ವಿಂಗಡಿಸಿ ಮರುಬಳಕೆಗೆ ಮತ್ತು ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಕ್ರಮ ವಹಿಸಲಾಗುತ್ತದೆ ಎಂದರು.
ಅಫಜಲಪೂರ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅಬ್ದುಲ್ ನಭಿ ಮಾತನಾಡಿ ಜಿಲ್ಲೆಯ 264 ಗ್ರಾಮ ಪಂಚಾಯತಿಗಳಲ್ಲಿ “ಸ್ವಚ್ಛ ಸಂಕೀರ್ಣ” ಸ್ಥಾಪಿಸಲು ಉದ್ದೇಶಿಸಲಾಗಿದೆ. ಪ್ರತಿ ಗ್ರಾಮ ಪಂಚಾಯತಿಯಲ್ಲಿ ಸ್ಥಾಪಿಸಲಾಗುವ ಸಂಕೀರ್ಣ ವಿನ್ಯಾಸದ ಮಾದರಿಯೂ ಒಂದೇ ಇರಲಿದ್ದು, ಏಕರೂಪದ ಬ್ರ್ಯಾಂಡಿಂಗ್ ಹೊಂದಿರುವುದು ಇದರ ವಿಶೇಷವಾಗಿದೆ. ಇದೂವರೆಗೆ ಜಿಲ್ಲೆಯ 90 ಗ್ರಾಮ ಪಂಚಾಯತಿಗಳಲ್ಲಿ ಘಟಕ ಸ್ಥಾಪನೆಗೆ ಸರ್ಕಾರವು ಅನುಮೋದನೆ ನೀಡಿದ್ದು, ಪ್ರಸ್ತುತ 17 ಗ್ರಾಮ ಪಂಚಾಯತಿಗಳಲ್ಲಿ ಘಟಕಗಳು ಪೂರ್ಣಗೊಂಡು ಕಾರ್ಯನಿರ್ವಹಿಸುತ್ತಿವೆ ಎಂದರು.
ಪ್ಲಾಸ್ಟಿಕ್ ಕೊಡಿ ಅಡುಗೆ ಎಣ್ಣೆ ತೊಗೋಳಿ: ದೇವಲ ಗಾಣಗಾಪೂರ ಪಿ.ಡಿ.ಓ. ಗುರುನಾಥ ಹರಿದಾಸ ಮತನಾಡಿ ಗ್ರಾಮದಲ್ಲಿ ಸ್ವಚ್ಛತೆ, ಪರಿಸರ ನಿರ್ವಹಣೆ ಹಾಗೂ ತ್ಯಾಜ್ಯ ವಿಲೇವರಿಗೆ ಅನೇಕ ಕ್ರಮಗಳನ್ನು ಕೈಗೊಂಡಿದೆ. ಪ್ಲಾಸ್ಟಿಕ್ ಮುಕ್ತ ಗ್ರಾಮ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಒಂದು ಕೆ.ಜಿ. ಪ್ಲಾಸ್ಟಿಕ್ ನೀಡಿದಲ್ಲಿ 1 ಕೆ.ಜಿ. ಅಡುಗೆ ಎಣ್ಣೆ ನೀಡಲಾಗುವುದು ಎಂದು ತಿಳಿಸಿದರು.
ಸ್ವಚ್ಛೋತ್ಸವ ನಿತ್ಯೋತ್ಸವ ಮಾಸಾಚರಣೆ: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಘನ ಮತ್ತು ದ್ರವತ್ಯಾಜ್ಯದ ನಿರ್ವಹಣೆ, ವಿಲೇವಾರಿ ಕುರಿತು ಗ್ರಾಮಸ್ಥರಲ್ಲಿ ವ್ಯಾಪಕವಾದ ಜಾಗೃತಿ ಮೂಡಿಸುವ ಉದ್ದೇಶದಿಂದ ಅಕ್ಟೋಬರ್ 2ರಿಂದ 31ರ ವರೆಗೆ “ಸ್ವಚ್ಛೋತ್ಸವ-ನಿತ್ಯೋತ್ಸವ” ಮಾಸಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಂದು ಗ್ರಾಮವು ಸ್ವಚ್ಛ, ಸುಂದರ, ಆರೋಗ್ಯಕರ ಮತ್ತು ತ್ಯಾಜ್ಯ ಮುಕ್ತವಾಗಿಸುವ ಉದ್ದೇಶ ಹೊಂದಲಾಗಿದೆ.
ಇದೇ ಸಂದರ್ಭದಲ್ಲಿ ಯೋಜನೆ ಬಗ್ಗೆ ಅರಿವು ಮೂಡಿಸುವ ಭಿತ್ತಿ ಪತ್ರಗಳ ಬಿಡುಗಡೆ ಮಾಡಿದ ಗಣ್ಯರು ಸಾಂಕೇತಿಕವಾಗಿ ಐದು ಜನ ಗ್ರಾಮಸ್ಥರಿಗೆ ಮನೆಯಲ್ಲಿ ಕಸ ವಿಂಗಡನೆ ಮಾಡಿ ಇಡುವ ಕಸದ ಡಬ್ಬಿಗಳನ್ನು ವಿತರಿಸಲಾಯಿತು. ಕಸ ಸಂಗ್ರಹಣೆಗೆ ಗ್ರಾಮದಲ್ಲಿ ಸಂಚರಿಸುವ ಸ್ವಚ್ಛ ವಾಹಿನಿಗೂ ಚಾಲನೆ ನೀಡಲಾಯಿತು.
ಬಾಪುವಿಗೆ ನಮನ: ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಬಾಪುವಿನ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗಣ್ಯರೆಲ್ಲರು ಗೌರವ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದ ಸಂಯೋಜಕರಾದ ಪಾಪರೆಡ್ಡಿ ಬಿ. ಶೇರಿಕಾರ, ಮಲ್ಲಿಕಾರ್ಜುನ ಕುಂಬಾರ, ಭಾಗಪ್ಪ, ಸಿಬ್ಬಂದಿಗಳಾದ ಸಿದ್ರಾಮ, ಶಿವಪ್ಪ ಪಟ್ಟೇದ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಇದ್ದರು
ಸ್ವಚ್ಛ ಬಾರತ್ ಮಿಷನ್(ಗ್ರಾ) ಜಿಲ್ಲಾ ಸಂಯೋಜಕಿ ಗುರುಬಾಯಿ ಅವರು “ಸ್ವಚ್ಛ ಸಂಕೀರ್ಣ” ಘಟಕದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಅಫಜಲಪೂರ ತಾಲೂಕು ಪಂಚಾಯತಿಯ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ರಮೇಶ ಪಾಟೀಲ ವಂದಿಸಿದರು.




