Featured StoryNational

ಮೋದಿ ಯಾರಪ್ಪನ ಆಸ್ತಿ..? ಇವರಪ್ಪನಾ ಆಸ್ತಿನಾ ? – ರಾಘವೇಂದ್ರನ ವಿರುದ್ಧ ಗುಡುಗಿದ ಈಶ್ವರಪ್ಪ

ಬೈಂದೂರು: ನಾನು ಯಾರ ಬೆದರಿಕೆಗೆ ಬಗ್ಗಲ್ಲ. ಯಾರಿಗೆ ಹೆಚ್ಚು ಕೇಸ್ ಇರುತ್ತೆಯೋ ಅವನೇ ನಿಜವಾದ ಲೀಡರ್. ಮೋದಿ ಯಾರಪ್ಪನ ಆಸ್ತಿ..? ಇವರಪ್ಪನಾ ಆಸ್ತಿನಾ, ಚುನಾವಣೆಯಲ್ಲಿ ಸೀಮಿತವಾಗಿಟ್ಟುಕೊಂಡು ಇವನೊಬ್ಬನೇ ಅವರ ಫೋಟೋ ಹಾಕಿಕೊಳ್ಳಬೇಕಾ? ರಾಘವೇಂದ್ರನಿಗೆ ಮಾತ್ರ ಮೋದಿನಾ? ಅಥವಾ ವಿಶ್ವನಾಯಕರಾ ಎಂಬುದು ನ್ಯಾಯಾಲಯ ತೀರ್ಮಾನ ಮಾಡಲಿ ಎಂದು ಬಿ.ವೈ ರಾಘವೇಂದ್ರ ವಿರುದ್ಧ ಕೆ.ಎಸ್ ಈಶ್ವರಪ್ಪ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಕುಂದಾಪುರ ಸಮೀಪದ ಹೆಮ್ಮಾಡಿಯ ಖಾಸಗಿ ಹೋಟೆಲ್‍ನಲ್ಲಿ ಬುಧವಾರ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ಯಡಿಯೂರಪ್ಪ ಕೆಜೆಪಿ ಕಟ್ಟಿದ್ದು ಅಧಿಕಾರ ದಾಹದಿಂದ. ನನ್ನಂತ ನಾಯಕ ಮತ್ತೊಬ್ಬನಿಲ್ಲ ಎಂದು ಯಡಿಯೂರಪ್ಪ ಕೇಂದ್ರದವರಿಗೆ ಮಂಕುಬೂದಿ ಎರಚಿದ್ದಾರೆ. ನನ್ನ ಮಗನಿಗೆ ಹಾವೇರಿಯಲ್ಲಿ ಟಿಕೆಟ್ ಕೊಡಿಸುವುದಾಗಿ ಆಣೆ ಮಾಡಿದ್ದರು. ಕಾಂತೇಶ್ ಗೆ ಹಾವೇರಿ ಟಿಕೆಟ್ ನೀಡಿ, ತಾನೇ ಓಡಾಡಿ ಗೆಲ್ಲಿಸ್ತೀನಿ ಎಂದು ಯಡಿಯೂರಪ್ಪ ಸುಳ್ಳು ಹೇಳಿ ಮೋಸ ಮಾಡಿದ್ದಾರೆ. ಬಿಜೆಪಿ ಸಿದ್ದಾಂತದ ಪಕ್ಷ ಸಿದ್ದಾಂತ ಬಿಟ್ಟು ಕುಟುಂಬ ರಾಜಕಾರಣದತ್ತ ಹೋಗಿದ್ದು ಅದನ್ನು ಶುದ್ಧ ಮಾಡಲು ನನ್ನ ಸ್ಪರ್ಧೆ ಹೊರತು ಬಿಜೆಪಿ ವಿರುದ್ಧ ಸ್ಪರ್ಧೆಯಲ್ಲ ಎಂದರು.

ಬಿಜೆಪಿಯ ಹಲವು ಕಾರ್ಯಕರ್ತರು ನೊಂದಿದ್ದು ನನ್ನ ನಂಬಿದ್ದಾರೆ. ಹಿಙದುತ್ವಕ್ಕೆ ನ್ಯಾಯ ಸಿಗಬೇಕಾದರೆ ನಾನು ಗೆಲ್ಲಬೇಕು ಎಂದು ಹಿಂದುತ್ವವಾದಿಗಳು ಬಯಸಿದ್ದಾರೆ. ಜನರ ಬೆಂಬಲ, ನೊಂದ ಕಾರ್ಯಕರ್ತರು, ಹಿಂದುತ್ವವಾದಿಗಳ ಬೆಂಬಲದಿಂದ ಚುನಾವಣೆ ಗೆಲ್ಲುವ ವಿಶ್ವಾಸವಿದೆ. ಹಿಂದೂ ಸಮಾಜ ನನಗೆ ಬೆಂಬ ನೀಡಿದೆ.

ಅಮಿತ್ ಷಾ ದೇಶದ ಉಕ್ಕಿನ ಮನುಷ್ಯ. ಕಳೆದ ವಾರ ಕರೆ ಮಾಡಿದಾಗ ‘ಅಪ್ಪ-ಮಕ್ಕಳ ಕೈಗೆ ಪಕ್ಷ ಕೊಟ್ಟಿದ್ದು ಕೇಂದ್ರದಲ್ಲಿ ಕುಟುಂಬ ರಾಜಕಾರಣ ಮುಕ್ತಿಗೆ ಹೊರಟಿದ್ದೀರಿ, ಇದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದೆ. ಹಿಂದುತ್ವಕ್ಕೆ ಹೋರಾಟ ಮಾಡಿದವರ ಕಡೆಗಣನೆ.
ಯಾವುದೋ ಜಾತಿ, ಹೊಸಬರಿಗೆ ಮಣೆ ಹಾಕಲಾಗಿದೆ’ ಎಂದು ಷಾ ಅವರ ಗಮನಕ್ಕೆ ತಂದೆ.‌ಅವರು ದೆಹಲಿಗೆ ಕರೆದಾಗ ಹೋಗಿದ್ದು ಬೇಟಿ ಮಾಡಲು ಆಗಿಲ್ಲ. ನಾನು ಹೇಳಿದ ಅಂಶದ ಬಗ್ಗೆ ಷಾ ಹಾಗೂ ಮೋದಿ ಕೂತು ಚರ್ಚೆ ಮಾಡಿರಬಹುದು. ಚುನಾವಣೆಯಲ್ಲಿ ನಿಂತು ಗೆಲ್ಲಲಿ ಎಂದು ಅವರ ಅನಿಸಿಕೆ ಇರಬಹುದು ಎಂಬುದು ನನ್ನ ಭಾವನೆ. ದೊಡ್ಡವರ ಮಾತು ಜೀವನದಲ್ಲಿ ಮೀರಿಲ್ಲ. ಸಂಘಟನೆ ಹೇಳಿದ ಮಾತು ಕೇಳಿಕೊಂಡು ಬಂದವನು ನಾನು. ಈಶ್ವರಪ್ಪ ವಾಪಾಸ್ ಆಗ್ತಾರೆ ಅಂತಾ ಈಗಲು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಬ್ರಹ್ಮನ ಬಂದರೂ ನಾನು ನನ್ನ ನಿರ್ಧಾರದಿಂದ ವಾಪಾಸ್ಸಾಗಲ್ಲ ಎಂದ ಅವರು ಬರೆದಿಟ್ಟುಕೊಳ್ಳಿ ಸರ್ ನೂರಕ್ಕೆ ನೂರು ರಾಘವೇಂದ್ರ ಸೋಲ್ತಾರೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ‌ ಸಮಿತಿ ಮಾಜಿ ಸದಸ್ಯ ಗೋಪಾಲ ನಾಡ, ಹಿಂದೂ ಸಂಘಟನೆ ಮುಖಂಡ ಶ್ರೀಧರ್ ಬಿಜೂರು, ಕಟ್ ಬೆಲ್ತೂರು ಗ್ರಾ.ಪಂ ಮಾಜಿ ಅಧ್ಯಕ್ಷ ನಾಗರಾಜ ಪುತ್ರನ್, ಮೀನುಗಾರ ಮುಖಂಡ ಮೋಹನ್ ಖಾರ್ವಿ ಮೊದಲಾದವರಿದ್ದರು‌.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button