136 ಗ್ರಾಪಂಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳ ಆರಂಭಕ್ಕೆ ಕ್ರಮ : ಜಾನಕಿರಾಂ
ಬಳ್ಳಾರಿ/ಹೊಸಪೇಟೆ, ಅ.03:- ಹೊಸಪೇಟೆ ತಾಲೂಕಿನ ಮಲಪನಗುಡಿ ಗ್ರಾಮದಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕ ಶುಕ್ರವಾರದಿಂದ ಕಾರ್ಯಾರಂಭ ಮಾಡಲಾಗಿದೆÉ. ಈ ಘಟಕಕ್ಕೆ ಹಾಗೂ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ಪುನರ್ ಬಳಕೆ ಮಾಡುವುದಕ್ಕೆ ಸಂಬಂಧಿಸಿದ ವಸ್ತುಪ್ತದರ್ಶನಕ್ಕೆ ಜಿಪಂ ಯೋಜನಾ ನಿರ್ದೇಶಕರಾದ ಡಿ.ಜಾನಕಿರಾಂ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಯೋಜನಾ ನಿರ್ದೇಶಕ ಜಾನಕಿರಾಂ ಅವರು ಜಿಲ್ಲೆಯಲ್ಲಿರುವ 237 ಗ್ರಾಮ ಪಂಚಾಯಿತಿಗಳಲ್ಲಿ 136 ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳ ಆರಂಭಕ್ಕೆ ಸಂಬಂಧಿಸಿದಂತೆ ಡಿಪಿಆರ್ ಅನುಮೋದಿಸಲಾಗಿದ್ದು, ಗ್ರಾಪಂಗಳಲ್ಲಿ 12ಲಕ್ಷ ರೂ.ವೆಚ್ಚದಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ, ಕಸ ಸಂಗ್ರಹಕ್ಕೆ ವಾಹನ, ಘನ ಮತ್ತು ದ್ರವ ತ್ಯಾಜ್ಯ ಸಂಗ್ರಹಿಸಿ ವಾಹನ ಬಂದಾಗ ಹಾಕುವುದಕ್ಕಾಗಿ ಪ್ರತಿಯೊಂದು ಕುಟುಂಬಕ್ಕೆ ಎರಡು ಬುಟ್ಟಿಗಳನ್ನು ಒದಗಿಸಲು ಕ್ರಮವಹಿಸಲಾಗಿದೆ ಎಂದರು.
ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಬಿಸಾಡದೇ ಕಸ ಸಂಗ್ರಹಣಾ ವಾಹನದಲ್ಲಿಯೇ ಹಾಕಬೇಕು ಮತ್ತು ಸ್ವಚ್ಚತೆ ಕಾಪಾಡಬೇಕು ಎಂದರು.
ಜಿಲ್ಲೆಯಲ್ಲಿ ಈಗಾಗಲೇ ದೇಸಿ ಲೈವ್ ಸರ್ವೇ ಪ್ರಕಾರ 2,93,118 ಶೌಚಾಲಯಗಳನ್ನು ಪೂರ್ಣಗೊಳಿಸಿ ತದನಂತರ ಬೇಸ್ಲೈನ್ ಸರ್ವೆಯಿಂದ ಹೊರಗೆ ಉಳಿದವರನ್ನು ಸಮೀಕ್ಷೆ ಮಾಡಿ ಎಲ್ಲಾ ಕುಟುಂಬಗಳಿಗೆ ಈ ವೈಯಕ್ತಿಕ ಶೌಚಾಲಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಕುಮಾರ್, ಸಹಾಯಕ ನಿರ್ದೇಶಕರಾದ ಉಮೇಶ, ಗ್ರಾಪಂ ಆಡಳಿತಾಧಿಕಾರಿಗಳು, ಮಲಪನಗುಡಿ ಗ್ರಾಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ-ಆಶಾ ಕಾರ್ಯಕರ್ತೆಯರು, ಗಣ್ಯವ್ಯಕ್ತಿಗಳು ಸೇರಿದಂತೆ, ಸಾರ್ವಜನಿಕರು ಇದ್ದರು.




