ಕೋಟ: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ ಹೊಡೆದು ಬೈಕ್‌ ಸವಾರ ಸ್ಥಳದಲ್ಲೇ ಮೃತ್ಯು

ಕೋಟ: ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿಯಾಗಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಟ ಅಮೃತೇಶ್ವರೀ ವೃತ್ತದ ಬಳಿ ಶನಿವಾರ ತಡರಾತ್ರಿ ನಡೆದಿದೆ.

ಕೋಟತಟ್ಟು ಕಲ್ಮಾಡಿ ನಿವಾಸಿ ಪಾತ್ರಿ ಮಂಜುನಾಥ್‌ ಗಾಣಿಗ ಅವರ ಪುತ್ರ ವಾಸುದೇವ ಗಾಣಿಗ (33) ಮೃತ ಯುವಕ. ಅವರು ತೆಕ್ಕಟ್ಟೆಯ ಖಾಸಗಿ ಹೊಟೇಲ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ತಡರಾತ್ರಿ 12 ಗಂಟೆ ವೇಳೆಗೆ ಕೆಲಸ ಮುಗಿಸಿ ಮನೆಗೆ ಬರಲು ಕುಂದಾಪುರದಿಂದ ಉಡುಪಿ ಕಡೆಗೆ ತೆರಳುವ ರಸ್ತೆಯಲ್ಲಿ ಬಂದು ಕೋಟ ಡಿವೈಡರ್‌ನಲ್ಲಿ ಬೈಕ್‌ ತಿರುಗಿಸುವ ವೇಳೆ ಮಂಗಳೂರಿನಿಂದ ಶಿರಸಿ ಕಡೆ ಸಂಚರಿಸುತ್ತಿದ್ದ ಬಸ್‌ ಢಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ಬೈಕ್‌ ಸವಾರನ ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿತ್ತು. ತತ್‌ಕ್ಷಣ ಕೋಟ ನಾಗರಾಜ್‌ ಪುತ್ರನ್‌ ಅವರ ಜೀವನ್‌ಮಿತ್ರ ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತಾದರೂ, ಗಾಯಾಳು ಅದಾಗಲೇ ಮೃತಪಟ್ಟಿದ್ದರು.

ಘಟನ ಸ್ಥಳಕ್ಕೆ ಕೋಟ ಠಾಣೆಯ ಎಎಸ್‌ಐ ಜಯಪ್ರಕಾಶ್‌ ಹಾಗೂ ಸಿಬಂದಿ ಅಶೋಕ್‌ ಅವರು ಆಗಮಿಸಿ ಠಾಣಾಧಿಕಾರಿ ತೇಜಸ್ವಿಯವರ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತರು ಅವಿವಾಹಿತರಾಗಿದ್ದು ತಾಯಿ ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ. ಅತ್ಯಂತ ಸೌಮ್ಯ ಸ್ವಭಾವದವರಾಗಿದ್ದ ಅವರು ಈ ಹಿಂದೆ ಹಲವು ವರ್ಷ ವಿದೇಶದಲ್ಲಿದ್ದರು. ಇತ್ತೀಚೆಗೆ ಊರಿಗೆ ಬಂದು ಹೊಟೇಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

Latest Indian news

Popular Stories