ಕಾರು – ಲಾರಿ ನಡುವೆ ಭೀಕರ ಅಪಘಾತ;ಕಾಸರಗೋಡು ಮೂಲದ ಒಂದೇ ಕುಟುಂಬದ ಐವರು ಮೃತ್ಯು

ಕಣ್ಣೂರು: ಕಾರು – ಲಾರಿ ನಡುವಿನ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿರುವ ದಾರುಣ ಘಟನೆ ಕಣ್ಣೂರು ಜಿಲ್ಲೆಯ ಚೆರುಕುನ್ನು ಸಮೀಪದ ಪುನ್ನಚೇರಿ ಎಂಬಲ್ಲಿ ಸೋಮವಾರ ರಾತ್ರಿ (ಏ.29 ರಂದು) ನಡೆದಿದೆ.

ಕಾರು ಚಲಾಯಿಸುತ್ತಿದ್ದ ಕಾಸರಗೋಡು ಕಾಳೀಚನಡುಕ್ಕಂನ ಸಾಸ್ತಂಪಾರದ ಕೆ.ಎನ್.ಪದ್ಮಕುಮಾರ್ (59), ಭೀಮಾನಡಿಯ ಚೂರಿಕಟ್ಟೆಯ ಸುಧಾಕರನ್ (52), ಸುಧಾಕರನ್ ಅವರ ಪತ್ನಿ ಅಜತಾ (35), ಅವರ ತಂದೆ ಕೊಜುಮ್ಮಲ್ ಕೃಷ್ಣನ್ (65) ಮತ್ತು ಅಜಿತಾ ಅವರ ಸಹೋದರ ಅಜಿತ್ ಅವರ ಮಗ ಆಕಾಶ್ (9) ಮೃತಪಟ್ಟಿದ್ದಾರೆ.

ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಬಾಲಕ ಆಕಾಶ್‌ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.ಚೆರುಕುನ್ನು ಬಳಿಯ ಪುನ್ನಚೇರಿಯ ಪೆಟ್ರೋಲ್ ಪಂಪ್ ಬಳಿ ಈ ಅಪಘಾತ ಸಂಭವಿಸಿದೆ. ಹಿಂಬದಿಯಿಂದ ಬಂದ ಲಾರಿ ಕಾರಿಗೆ ಢಿಕ್ಕಿ ಹೊಡೆದಿದ್ದರಿಂದ ಕಾರು ನಿಯಂತ್ರಣ ತಪ್ಪಿ ಎದುರುಗಡೆಯಿಂದ ಬರುತ್ತಿದ್ದ ಮತ್ತೊಂದು ಲಾರಿಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಈ ಘಟನೆ ಸಂಭವಿಸಿದೆ.

ಗ್ಯಾಸ್ ಸಿಲಿಂಡರ್ ತುಂಬಿದ ಲಾರಿ ಮಂಗಳೂರಿನಿಂದ ಬರುತ್ತಿತ್ತು. ಸುಧಾಕರನ್ ಮತ್ತು ಅವರ ಕುಟುಂಬ ಸದಸ್ಯರು ತಮ್ಮ ಮಗ ಸೌರವ್‌ನನ್ನು ಕೋಝಿಕ್ಕೋಡ್ನಲ್ಲಿರುವ ಶಿಕ್ಷಣ ಸಂಸ್ಥೆಗೆ ಸೇರಿಸಿದ ನಂತರ ಕಾಸರಗೋಡಿಗೆ ಹಿಂತಿರುಗುತ್ತಿದ್ದರು.

ಕಾರಿನೊಳಗೆ ಸಿಲುಕಿದ್ದವರನ್ನು ಕಾರಿನ ಗಾಜು ಒಡೆದು ಸ್ಥಳೀಯರು ಹೊರಗೆ ತೆಗೆಯಲು ಯತ್ನಿಸಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಪಘಾತ ಮಾಡಿದ ಲಾರಿಗಳ ಇಬ್ಬರು ಚಾಲಕರನ್ನು ಕನ್ನಪುರಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Latest Indian news

Popular Stories