ಬಾವಿ ಕಳುವಾಗಿದೆ ಎಂದು ದೂರು ಸಲ್ಲಿಸಿದ ರೈತ !

ಬೆಳಗಾವಿ: ಸಾಮಾನ್ಯವಾಗಿ ಕಾರ್. ಬೈಕ್, ಮನೆಯಲ್ಲಿದ್ದ ವಸ್ತು ಹಾಗೂ ತುಂಬಾ ಬೇಕಾದ ವಸ್ತುಗಳು ಕಳೆದು ಹೋದರೆ ಪೊಲೀಸ್ ಠಾಣೆ ಮೆಟ್ಟಿಲು ಏರಿ ಅದನ್ನ ಹುಡುಕಿಕೊಂಡುವAತೆ ಮನವಿ ಮಾಡುವುದು ಸಹಜ. ಆದರೆ, ಇಲ್ಲೊಬ್ಬ ರೈತರು ತಮ್ಮ ಜಮೀನಿನಲ್ಲಿದ್ದ ಬಾವಿಯೇ ಕಳುವಾಗಿದೆ ಎಂದು ದೂರಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮಾವಿನಹೊಂಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಾವಿ ಕಳ್ಳತನ ಪ್ರಕರಣಕ್ಕೆ ತಾಲೂಕು ಪಂಚಾಯತ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳೆ ಕಾರಣ ಎಂದು ರೈತ ಮಲ್ಲಪ್ಪ ಕುಲುಗಡೆ ಆರೋಪಿಸಿದ್ದಾರೆ.
ಮಾವಿನಹೊಂಡ ಗ್ರಾಮದ ನಿವಾಸಿಯಾಗಿರುವ ಈ ರೈತ, ರಾಯಬಾಗ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ರೈತ ಮಲ್ಲಪ್ಪ ಅವರು ಜಮೀನು ಸರ್ವೆ ನಂಬರ 21/1 ರಲ್ಲಿದೆ. ಮಾವಿನಹೊಂಡ ಗ್ರಾಮವು ಭೇಂಡವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿದೆ.
ಮಲ್ಲಪ್ಪ ಅವರ ಜಮೀನಿನಲ್ಲಿ ಮಾಲಿಕನಿಗೆ ಗೊತ್ತಿಲ್ಲದೆ ಭೇಂಡವಾಡ ಗ್ರಾಮದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಮೇಲಾಧಿಕಾರಿಗಳು ಸೇರಿಕೊಂಡು ಗದ್ದೆಯಲ್ಲಿ ಭಾವಿ ತೋಡಿರುವುದಾಗಿ 77 ಸಾವಿರ ರೂಪಾಯಿ ಹಣ ಲಪಟಾಯಿಸಿದ್ದಾರೆ. ಕಳೆದ ಎಪ್ರೀಲ್ 2020 ರಿಂದ ಮೇ 2021 ರ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಬಾವಿ ತೋಡಲಾಗಿದೆ ಎಂಬ ದಾಖಲೆಗಳನ್ನು ಸೃಷ್ಟಿಸಿ ಬಾವಿಯನ್ನು ತೋಡದೆ 77 ಸಾವಿರ ರೂ. ಎತ್ತಿಕೊಳ್ಳಲಾಗಿದೆ.
ಮಲ್ಲಪ್ಪ ಅವರ ಇಬ್ಬರು ಪುತ್ರರ ಹೆಸರಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಜಾಬ ಕಾರ್ಡ್ ಮಾಡಿಸಿ ಅವರ ಖಾತೆಗೆ ಹಣ ಜಮಾ ಮಾಡಿಸಿದ್ದಾರೆ. ಬಳಿಕ ಹಣ ಡ್ರಾ ಮಾಡಲು ರೈತ ಮಲ್ಲಪ್ಪ ಅವರ ಸಂಬAಧಿಕರನ್ನ ಬಳಸಿಕೊಂಡಿರುವ ಅಧಿಕಾರಿಗಳು ನಿಮ್ಮ ಸಹೋದರನ ಹೊಲದಲ್ಲಿ ಬಾವಿ ತೆಗೆಯಲಾಗಿದೆ. ಅದಕ್ಕೆ ನಿಮ್ಮ ಖಾತೆಗೆ ಹಣ ಜಮಾ ಮಾಡಿದ್ದೇವೆ ಅದನ್ನ ಮರಳಿ ನೀಡಬೇಕು ಎಂದು ಮನೆಗೆ ಬಂದು ಎಟಿಂಮ ಮೂಲಕ ಹಣ ಡ್ರಾ ಮಾಡಿಸಿಕೊಂಡಿದ್ದಾರೆ. ರೈತ ಮಲ್ಲಪ್ಪ ಈ ಕುರಿತು ವಿಚಾರಣೆ ನಡೆಸಿದಾಗ ಇಡಿ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಜಮೀನಿನಲ್ಲೆ ಬಾವಿ ತೋಡಿರುವುದಾಗಿ ದಾಖಲೆ ಸೃಷ್ಟಿಸಿ ಬಾವಿ ತೋಡದೆ ಹಣ ಲಪಟಾಯಿಸಿದ ಮಾಹಿತಿ ಸಿಗುತ್ತಿದ್ದಂತೆ ಅಧಿಕಾರಿಗಳ ವಿರುದ್ದ ಸಿಡಿದೆದ್ದಿದ್ದಾರೆ.
ತಾಲೂಕು ಪಂಚಾಯತಿ ಅಧಿಕಾರಿಗೆ ಹಾಗೂ ರಾಯಬಾಗ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ತಮ್ಮ ಜಮೀನಿನಲ್ಲಿರುವ ಬಾವಿ ಹುಡುಕಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

Latest Indian news

Popular Stories