ಪ್ರಜ್ವಲ್ ರೇವಣ್ಣ ಮಾಜಿ ಚಾಲಕ ವೀಡಿಯೋ ಇರುವ ಪೆನ್’ಡ್ರೈವ್ ನೀಡಿದ್ದು ಯಾರಿಗೆ? – ಅಜ್ಞಾತ ಸ್ಥಳದಿಂದ ವೀಡಿಯೋ ಮಾಡಿದ ಪ್ರಜ್ವಲ್ ಮಾಜಿ ಡ್ರೈವರ್ ಕಾರ್ತಿಕ್!

ಹಾಸನ: ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ (HD Devegowda) ಮೊಮ್ಮಗ ಹಾಗೂ ಜೆಡಿಎಸ್‌ನ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Sex Scandal Case) ವಿರುದ್ಧ ಕೇಳಿ ಬಂದಿರುವ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಅಚ್ಚರಿಯ ಮಾಹಿತಿಗಳು ಹೊರಗೆ ಬರುತ್ತಿದ್ದು, ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್‌ ರೇವಣ್ಣರ ಮಾಜಿ ಕಾರು ಚಾಲಕ ಅಚ್ಚರಿಯ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್‌ ರೇವಣ್ಣರ ಮಾಜಿ ಕಾರ್ ಚಾಲಕ ಕಾರ್ತಿಕ್ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿದ್ದು, ಇದರಲ್ಲಿ ಅನೇಕ ಅಚ್ಚರಿಯ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ವಿಡಿಯೋದಲ್ಲಿ ಸ್ಪಷ್ಟನೆ ನೀಡಿರುವ ಕಾರ್ತಿಕ್, ‘ನಾನು ಹದಿನೈದು ವರ್ಷದಿಂದ ಪ್ರಜ್ವಲ್‌ ರೇವಣ್ಣ ಹಾಗೂ ಅವರ ಫ್ಯಾಮಿಲಿಗೆ ಕಾರು ಡ್ರೈವರ್ ಆಗಿ ಕೆಲಸ ಮಾಡಿದ್ದೀನಿ. ಒಂದು ವರ್ಷದಿಂದ ಕೆಲಸ ಬಿಟ್ಟಿದ್ದೀನಿ. ನನ್ನ ಜಮೀನು ಬರೆಸಿಕೊಂಡು ನನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ರು, ಹಿಂಸೆ ಕೊಟ್ಟು ಹಲ್ಲೆ ಮಾಡಿದರು. ಆದ್ದರಿಂದ ಅವರ ಮನೆಯಿಂದ ಹೊರಬಂದೆ’ ಎಂದು ಹೇಳಿದ್ದಾರೆ.

ಅಲ್ಲದೇ, ‘ದೇವರಾಜೇಗೌಡ ಇವರ (ಜೆಡಿಎಸ್‌) ಫ್ಯಾಮಿಲಿ ವಿರುದ್ಧ ಹೋರಾಟ ಮಾಡುತ್ತಿದ್ದರು. ಯಾರಿಂದಲೂ ನ್ಯಾಯ ಸಿಗಲ್ಲ ಅಂತ ದೇವರಾಜೇಗೌಡ ಬಳಿ ಹೋದೆ’ ಎಂದಿರುವ ಮಾಜಿ ಕಾರ್ ಚಾಲಕ ಕಾರ್ತಿಕ್, ‘ಯಾವುದೇ ಅಶ್ಲೀಲ ವಿಡಿಯೋ ರಿಲೀಸ್ ಮಾಡಬಾರದು ಎಂದು ನನ್ನ ವಿರುದ್ದ ಪ್ರಜ್ವಲ್‌ ರೇವಣ್ಣ ಸ್ಟೇ ತಂದಿದ್ದಾರೆ. ಆಗ ನಿನ್ನ ಬಳಿ ಇರುವ ವಿಡಿಯೋ, ಫೋಟೋಸ್ ನಾನು ಯಾರಿಗೂ ತೋರಿಸಲ್ಲ ಕೊಡು ಎಂದು ದೇವರಾಜೇಗೌಡ ಕೇಳಿದ್ರು. ನಾನು ನಂಬಿ ನನ್ನ ಬಳಿಯಿದ್ದ ವಿಡಿಯೋದ ಒಂದು ಕಾಪಿ ಕೊಟ್ಟೆ. ಅವರು ಅದನ್ನು ಸ್ವಾರ್ಥಕ್ಕೆ ಉಪಯೋಗಿಸಿಕೊಂಡರೋ ಗೊತ್ತಿಲ್ಲ. ದೇವರಾಜೇಗೌಡರನ್ನು ಬಿಟ್ಟರೆ ಬೇರೆ ಯಾರಿಗೂ ಕೊಟ್ಟಿಲ್ಲ ಎಂದು ಹೇಳುವ ಮೂಲಕ ತನ್ನ ಬಳಿ ವಿಡಿಯೋ ಇತ್ತು ಎಂದು ಕಾರ್ತಿಕ್ ಒಪ್ಪಿಕೊಂಡಿದ್ದಾರೆ.

ಇದೇ ವೇಳೆ ‘ಕಾಂಗ್ರೆಸ್‌ನವರಿಗಂತೂ ನಾನು ವಿಡಿಯೋ ಕೊಟ್ಟಿಲ್ಲ’ ಎಂದಿರುವ ಕಾರ್ತಿಕ್, ಕಾಂಗ್ರೆಸ್ ಅವರ ಮೇಲೆ ನಂಬಿಕೆ ಇಲ್ಲದೆ ದೇವರಾಜೇಗೌಡರ ಹತ್ತಿರ ಕೊಟ್ಟಿದ್ದೆ. ಪೆನ್‌ಡ್ರೈವ್ ಯಾರು ಹಂಚಿದರೋ ಗೊತ್ತಿಲ್ಲ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾನು ಕಾಂಗ್ರೆಸ್ ಅವರಿಗೆ ಕೊಡುವುದಿದ್ದರೆ ದೇವರಾಜೇಗೌಡ ಬಳಿ ಏಕೆ ಹೋಗುತ್ತಿದ್ದೆ? ಇವತ್ತು ಎಸ್‌ಐಟಿ ಮುಂದೆ ಹಾಜರಾಗಿ ಎಲ್ಲಾ ಹೇಳಿಕೊಳ್ಳುತ್ತೇನೆ. ನಂತರ ಮಾಧ್ಯಮದ ಮುಂದೆ ಎಲ್ಲವನ್ನೂ ವಿವರವಾಗಿ ಹೇಳುತ್ತೇನೆ. ಇದರಲ್ಲಿ ಕಾಂಗ್ರೆಸ್‌ನವರ ಹೆಸರನ್ನು ಬೆರೆಸಬೇಡಿ ಎಂದು ಕಾರ್ತಿಕ್ ಹೇಳಿದ್ದಾರೆ.





Latest Indian news

Popular Stories