ಸಿದ್ದರಾಮಯ್ಯ ಯಾರ ಗುಲಾಮರು ?

ಬೆಳಗಾವಿ: ಸಿದ್ದರಾಮಯ್ಯನವರು ಯಾರ ಗುಲಾಮರು ಎನ್ನುವುದು ದೇಶಕ್ಕೆ ಗೊತ್ತಿದೆ, ಸಿದ್ದರಾಮಯ್ಯ ಅವರು ಯಾರ ಕಾಲು ಹಿಡಿದು ಮುಖ್ಯಮಂತ್ರಿಯಾಗಿದ್ದರು ಎನ್ನುವುದೂ ಗೊತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಇಲ್ಲಿ ಹೇಳಿದರು.
ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಗುಲಾಮರು ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಕಟೀಲ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. `ಅವರು ಯಾರ ಗುಲಾಮರು ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದು ತಿರುಗೇಟು ನೀಡಿದರು. ಸಿ.ಡಿ ವಿಚಾರ ತನಿಖೆ ಹಂತದಲ್ಲಿದೆ. ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಸಿ.ಡಿಗಳು ಯಾವ ರೀತಿ ತನಿಖೆಯಾಗಿದೆ ಎನ್ನುವುದನ್ನು ರಾಜ್ಯದ ಜನ ಮರೆತಿಲ್ಲ ಎಂದರು.
ಸಿದ್ದರಾಮಯ್ಯ ಅವರಿಗೆ ಸಿಬಿಐ, ಐಟಿ, ಎಸ್‌ಐಟಿ ಮೇಲೆ ನಂಬಿಕೆ ಇಲ್ಲ. ಅಷ್ಟಕ್ಕೂ ಅವರಿಗೆ ಸ್ವತಃ ಅವರ ಮೇಲೆಯೇ ನಂಬಿಕೆ ಇಲ್ಲ ಎಂದು ನಳೀನಕುಮಾರ್ ಲೇವಡಿ ಮಾಡಿದರು. ಉಪಚುನಾವಣೆಯಲ್ಲಿ ಗೆಲುವು ನಮ್ಮದೆ ಎಂದ ಅವರು, ಇಂದು ಬೆಳಗಾವಿ ಲೋಕಸಭೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಮಂಗಳ ಅಂಗಡಿ ನಾಮಪತ್ರ ಸಲ್ಲಿಸಿದ್ದಾರೆ. ನಮ್ಮ ಉತ್ತಮ ಕೆಲಸಗಳು ಪಕ್ಷದ ಕೈ ಹಿಡಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Latest Indian news

Popular Stories