ಅಬಕಾರಿ ಅಕ್ರಮ ಚಟುವಟಿಕೆಗಳಿಗೆ ದೂರು ಸ್ವೀಕರಿಸಿ ಕ್ರಮ ಜರುಗಿಸಲು ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ
ಅಬಕಾರಿ ಇಲಾಖೆಯಿಂದ ನಿಯಂತ್ರಣಾ ಕೊಠಡಿ ಸ್ಥಾಪನೆ
ಬಳ್ಳಾರಿ,ಏ.16(ಕರ್ನಾಟಕ ವಾರ್ತೆ): ಬಳ್ಳಾರಿ ಮಹಾನಗರ ಪಾಲಿಕೆಯ 39 ವಾರ್ಡ್ಗಳಿಗೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಅಬಕಾರಿ ಅಕ್ರಮ ಚಟುವಟಿಕೆಗಳಿಗೆ ದೂರು ಸ್ವೀಕರಿಸಿ ಕ್ರಮಜರುಗಿಸುವ ನಿಟ್ಟಿನಲ್ಲಿ ಅಬಕಾರಿ ಇಲಾಖೆಯು ನಿಯಂತ್ರಣಾ ಕೊಠಡಿ ಸ್ಥಾಪಿಸಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ಮಹಾನಗರ ಪಾಲಿಕೆಗೆ ಏ.08ರಿಂದ ಏ.30ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಅಬಕಾರಿ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಮತ್ತು ಇತರರಿಂದ ಬರುವ ದೂರುಗಳನ್ನು ಸ್ವೀಕರಿಸಿ ಕ್ರಮ ಜರುಗಿಸಲು ಜಿಲ್ಲಾ ಮಟ್ಟದ ಇಲಾಖಾ ಟೋಲ್ ಫ್ರೀ ಸಂಖ್ಯೆ 08392-275555 ಸ್ಥಾಪನೆಯಾಗಿರುತ್ತದೆ.
ಜಿಲ್ಲಾಮಟ್ಟದಲ್ಲಿ ಬಳ್ಳಾರಿ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ದಿನದ 24 ಘಂಟೆಯು ಕಾರ್ಯ ನಿರ್ವಹಿಸುವಂತೆ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ ಎಂದು ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕಂಟ್ರೋಲ್ ರೂಂ ನಲ್ಲಿ ಕಚೇರಿಗೆ ಬರುವ ದೂರವಾಣಿ ಕರೆಗಳನ್ನು ಸ್ವೀಕರಿಸಿ ದೂರು ವಹಿಯಲ್ಲಿ ವಿಷಯ, ದೂರುದಾರರ ಹೆಸರು, ದಿನಾಂಕ, ಮತ್ತು ಸಮಯವನ್ನು ವಹಿಯಲ್ಲಿ ದಾಖಲಿಸಿ ಚುನಾವಣಾ ನಿಯಂತ್ರಣ ಕೊಠಡಿಯ ಘಟಕಾಧಿಕಾರಿಯವರಿಗೆ ಸಲ್ಲಿಸಲು ಹಾಗೂ ಹಗಲು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು 9 ಜನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ನಿಯೋಜಿಸಿದ ಸಿಬ್ಬಂದಿಯು ದಿನನಿತ್ಯದ ಕರ್ತವ್ಯಗಳ ಜೊತೆಗೆ ನಿಯಂತ್ರಣ ಕೊಠಡಿಯ ಕರ್ತವ್ಯ ನಿರ್ವಹಿಸುವುದು ಕಡ್ಡಾಯವಾಗಿದೆ. ಸೂಚಿಸಲಾಗಿರುವ ಕೆಲಸವನ್ನು ಕಟ್ಟುನಿಟ್ಟಾಗಿ ಚಾಚುತಪ್ಪದೇ ಪಾಲಿಸಲು ಆದೇಶಿಸಲಾಗಿದೆ. ತಪ್ಪಿದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.




