ಬಳ್ಳಾರಿ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ನಿವಾಸ, ಕಚೇರಿ ಸೇರಿ 4 ಕಡೆ ಇಡಿ ದಾಳಿ: ದಾಖಲೆಗಳ ವಶ

ಬಳ್ಳಾರಿ: ರಾಜ್ಯದಲ್ಲಿ ತನಿಖಾ ಸಂಸ್ಥೆಯಿಂದ ದಾಳಿ ಮುಂದುವರಿದಿದೆ. ಬಳ್ಳಾರಿ ನಗರದ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ (MLA Nara Bharath Reddy) ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಶನಿವಾರ ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲಿಸಿ ಕೆಲವನ್ನು ವಶಪಡಿಸಿಕೊಂಡಿದ್ದಾರೆ.

ಶಾಸಕರ ಬೆಂಗಳೂರು ಹಾಗೂ ಚೆನ್ನೈನ ಕಚೇರಿಗಳ ಮೇಲೂ ದಾಳಿ ನಡೆದಿದೆ ಎನ್ನಲಾಗಿದೆ. ಶಾಸಕ ಭರತ್‌ ರೆಡ್ಡಿ ಅವರ ಕುಟುಂಬ ಗ್ರಾನೈಟ್‌ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, ಕೊಪ್ಪಳ ಜಿಲ್ಲೆಯ ಕುಕನೂರು ಹಾಗೂ ಆಂಧ್ರ ಪ್ರದೇಶದ ಒಂಗೋಲ್‌ಗಳಲ್ಲಿ ಕ್ವಾರಿಗಳನ್ನು ಹೊಂದಿದೆ.ಇಡಿ ಅಧಿಕಾರಿಗಳ ತಂಡ ಬೆಂಗಳೂರಿನಿಂದ ಆಗಮಿಸಿದ್ದು, ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೆ ದಾಳಿ ನಡೆಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ಬೆಳಗ್ಗೆ 6.30ಕ್ಕೆ ಏಕಕಾಲಕ್ಕೆ ಶಾಸಕ ನಾರಾ ಭರತ ರೆಡ್ಡಿ ಮನೆ, ಅವರ ತಂದೆಯ ಕಚೇರಿ, ಅವರ ಚಿಕ್ಕಪ್ಪ ಪ್ರತಾಪ ರೆಡ್ಡಿ ಮನೆ ಮತ್ತು ಕಚೇರಿಯ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ.

ಇಡಿ ಅಧಿಕಾರಿಗಳ ನಾಲ್ಕು ತಂಡಗಳು ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ. ಭರತ್ ರೆಡ್ಡಿ ಮತ್ತು ಅವರ ಸಂಬಂಧಿಕರ ಮೇಲೆ ಯಾವ ಪ್ರಕರಣದಲ್ಲಿ ದಾಳಿ ನಡೆಸಲಾಗುತ್ತಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಾರಾ ಭರತ್ ರೆಡ್ಡಿ ಕಾಂಗ್ರೆಸ್ ನಿಂದ ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆ ಭರತ್‌ ರೆಡ್ಡಿ ಅವರ ನಿವಾಸ ಹಾಗೂ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

Latest Indian news

Popular Stories