ಬೆಂಗಳೂರು: 3000 ಸೋಂಕಿತರು ನಾಪತ್ತೆ

ಬೆಂಗಳೂರು: ನಗರದಲ್ಲಿ ಸುಮಾರು 3000 ಸೋಂಕಿತರು ನಾಪತ್ತೆಯಾಗಿದ್ದಾರೆ. ಕೋವಿಡ್ ದೃಢಪಟ್ಟ ನಂತರ ಇವರು ತಮ್ಮ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಾಸರಹಳ್ಳಿ ವಲಯ ವ್ಯಾಪ್ತಿಯ ಬಾಗಲಗುಂಟೆ ವಾರ್ಡ್ ಸಂಖ್ಯೆ-14ರಲ್ಲಿ ಬರುವ ಕಾರ್ಮಿಕ ಭವನದಲ್ಲಿ ಸ್ಥಾಪಿಸಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಸೋಂಕಿತರಿಗೆ ಯಾವುದೇ ಸಮಸ್ಯೆಯಾಗದಂತೆ ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಪಾಸಿಟಿವ್ ಆದವರ ಪತ್ತೆಗೆ ಯತ್ನಿಸಲಾಗುತ್ತಿದೆ. ಮೊಬೈಲ್ ಟ್ರಾö್ಯಕಿಂಗ್ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು. ಉಸಿರಾಟದ ಸಮಸ್ಯೆ ಆದಾಗ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆ ಬೇಕೆಂದು ಬರುತ್ತಿದ್ದಾರೆ. ಮುಂಚಿತವಾಗಿಯೇ ಕೋವಿಡ್ ಪಾಸಿಟಿವ್ ಎಂದು ತಿಳಿದ ತಕ್ಷಣ ಐಸೋಲೇಟ್ ಆಗಿ ಔಷಧ, ಮಾತ್ರೆಗಳನ್ನು ಸರಿಯಾಗಿ ತೆಗೆದುಕೊಂಡಲ್ಲಿ ಯಾವುದೇ ಸಮಸ್ಯೆ ಆಗದು ಎಂದು ಕಂದಾಯ ಸಚಿವರು ಹೇಳಿದರು.
ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಸೋಂಕಿತರನ್ನು ನೋಡಿಕೊಳ್ಳಲು ವೈದ್ಯರು, ಸಿಬ್ಬಂದಿಗಳನ್ನು ನಿಯೋಜಿಸಿದ್ದು, ಯಾರು ಆತಂಕ ಪಡುವ ಅಗತ್ಯವಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ 12 ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ದಾಸರಹಳ್ಳಿ ವಲಯದ ಕಾರ್ಮಿಕ ಭವನದಲ್ಲಿ ಇಂದು 127 ಹಾಸಿಗೆ ಸಾಮರ್ಥ್ಯದ ಕೋವಿಡ್ ಆರೈಕೆ ಕೇಂದ್ರವನ್ನು ತೆರೆಯಲಾಗಿದ್ದು, ಅದರಲ್ಲಿ 10 ಆಕ್ಸಿಜನ್ ಹಾಸಿಗೆಗಳನ್ನು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದ್ದಾರೆ.
ಕಾರ್ಮಿಕ ಭವನದಲ್ಲಿ ಕೋವಿಡ್ ಆರೈಕೆ ಕೇಂದ್ರ ಸುಸಜ್ಜಿತವಾಗಿದ್ದು, ವೈದ್ಯರು ಹಾಗೂ ಸಿಬ್ಬಂದಿಯನ್ನು ಎರಡು ಪಾಳಿಯಲ್ಲಿ ನಿಯೋಜನೆ ಮಾಡಲಾಗಿದೆ. ಒಂದು ಪಾಳಿಯಲ್ಲಿ 14 ಮಂದಿ ಕೆಲಸ ಮಾಡಲಿದ್ದಾರೆ. ಸೋಂಕಿತರಿಗೆ ಯಾವುದೇ ರೀತಿಯ ತೊಂದರೆಯಾಗದAತೆ ಶೌಚಾಲಯ, ಸ್ನಾನದ ಕೊಠಡಿ, ಅಡುಗೆ ವ್ಯವಸ್ಥೆ, ಊಟ ಮಾಡುವ ಕೊಠಡಿ, ಮನರಂಜನಾ ಕೊಠಡಿ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಸೋಂಕು ದೃಢಪಟ್ಟು ಎಸಿಮ್ಟಮ್ಯಾಟಿಕ್ ಇದ್ದು ಮನೆಯಲ್ಲಿ ಉಳಿಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಇಲ್ಲದಿರುವವರು ಕೋವಿಡ್ ಆರೈಕೆ ಕೇಂದ್ರಗಳಿಗೆ ಬಂದು ಆರೈಕೆ ಪಡೆಯಬಹುದು ಎಂದರು.
ಈ ವೇಳೆ ದಾಸರಹಳ್ಳಿ ವಲಯ ಕೋವಿಡ್ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಮಂಜುನಾಥ್, ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯಆಯುಕ್ತ ಗೌರವ್ ಗುಪ್ತ, ವಲಯ ಆಯುಕ್ತ ರವೀಂದ್ರ, ಜಂಟಿ ಆಯುಕ್ತ ನರಸಿಂಹಮೂರ್ತಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Latest Indian news

Popular Stories