ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

ನವದೆಹಲಿ: ಪ್ರಮುಖ ನ್ಯೂಸ್‌ ಪೋರ್ಟಲ್‌ ನ್ಯೂಸ್‌ ಕ್ಲಿಕ್‌ ವಿರುದ್ಧ ದೆಹಲಿ ಪೊಲೀಸರು ಬರೋಬ್ಬರಿ 8,000 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿರುವುದಾಗಿ ವರದಿ ತಿಳಿಸಿದೆ. ನ್ಯೂಸ್‌ ಕ್ಲಿಕ್‌ ಸ್ಥಾಪಕ ಪ್ರಬೀರ್‌ ಪುರ್ಕಾಯಸ್ಥ ಹಾಗೂ ಇತರರು ಭಯೋತ್ಪಾದನೆಗೆ ಆರ್ಥಿಕ ನೆರವು ಹಾಗೂ ಚೀನಾ ಪರ ಪ್ರಚಾರ ಕೈಗೊಂಡಿರುವುದಾಗಿ ಆರೋಪಿಸಲಾಗಿದೆ.

ಸುಮಾರು 8,000 ಪುಟಗಳ ಚಾರ್ಜ್‌ ಶೀಟ್‌ ನಲ್ಲಿ ರೈತರ ಪ್ರತಿಭಟನೆ ಮತ್ತು 2020ರ ದೆಹಲಿ ಗಲಭೆಯಲ್ಲಿ ಪ್ರಬೀರ್‌ ಕೈವಾಡ ಇದ್ದಿರುವುದಾಗಿ ತಿಳಿಸಿದೆ. ಭಾರತದಲ್ಲಿ ಚೀನಾದ ಪ್ರಪೋಗಾಂಡಾ ಪ್ರಚಾರ ಮಾಡಲು ಪುರ್ಕಾಯಸ್ಥ ಭಾರೀ ಪ್ರಮಾಣದ ದೇಣಿಗೆ ಪಡೆದಿರುವ ಬಗ್ಗೆ ಭಯೋತ್ಪಾದನಾ ನಿಗ್ರಹ ಕಾಯ್ದೆ ಯುಎಪಿಎ ಅನ್ವಯ ತನಿಖೆಗೆ ಒಳಪಡಿಸಲಾಗಿದೆ ಎಂದು ವರದಿ ತಿಳಿಸಿದೆ.

ಕಳೆದ ವರ್ಷ ಅಕ್ಟೋಬರ್‌ 3ರಂದು ನ್ಯೂಸ್‌ ಕ್ಲಿಕ್‌ ಸ್ಥಾಪಕ ಪ್ರಬೀರ್‌ ಹಾಗೂ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್‌ ಚಕ್ರವರ್ತಿಯನ್ನು ದೆಹಲಿ ವಿಶೇಷ ಪೊಲೀಸ್‌ ಘಟಕ ಬಂಧಿಸಿತ್ತು. ನಗರದ ಹಲವೆಡೆ ದಾಳಿ ನಡೆಸಿದ ನಂತರ ಇಬ್ಬರನ್ನೂ ದೆಹಲಿ ಪೊಲೀಸರು ಬಂಧಿಸಿ, ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಇಬ್ಬರೂ ತಿಹಾರ್‌ ಜೈಲಿನಲ್ಲಿ ಇದ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪುರ್ಕಾಯಸ್ಥ ಭಯೋತ್ಪಾದನಾ ಚಟುವಟಿಕೆಗಾಗಿ ಹಣ ಸಂಗ್ರಹಿಸುತ್ತಿದ್ದಿರುವುದಾಗಿ ದೆಹಲಿ ಪೊಲೀಸರು ಆರೋಪಿಸಿದ್ದಾರೆ. ನಿಷೇಧಿತ ಲಷ್ಕರ್‌ ಎ ತೊಯ್ಬಾ ಸೇರಿದಂತೆ ವಿವಿಧ ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ನೆರವು ನೀಡಿರುವುದಾಗಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

Latest Indian news

Popular Stories