ಶಾಲಾ ಪ್ರವಾಸದಲ್ಲಿ ಅನಾರೋಗ್ಯಕ್ಕೀಡಾದ ಯುವತಿಗೆ 88 ಲಕ್ಷ ರೂ. ಪರಿಹಾರ

ಹೊಸದಿಲ್ಲಿ : ಡಿಸೆಂಬರ್ 2006ರಲ್ಲಿ ಶಾಲಾ ಪ್ರವಾಸವೊಂದರ ಸಂದರ್ಭ ಅನಾರೋಗ್ಯಕ್ಕೀಡಾಗಿ ನಂತರ ಹಾಸಿಗೆ ಹಿಡಿದಿರುವ ಆಗ 14 ವರ್ಷದವಳಾಗಿದ್ದ ಹಾಗೂ ಈಗ 29 ವರ್ಷದವಳಾಗಿರುವ ಯುವತಿಗೆ ರೂ 88 ಲಕ್ಷ ಪರಿಹಾರ ಮೊತ್ತ ನೀಡಬೇಕೆನ್ನುವ ಕರ್ನಾಟಕ ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಮಾರ್ಚ್ 2016ರ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಸೆಪ್ಟೆಂಬರ್ 2016ರಲ್ಲಿನ ತನ್ನ ಆದೇಶದಲ್ಲಿ ಪರಿಹಾರ ಮೊತ್ತವನ್ನು ರೂ. 50 ಲಕ್ಷಕ್ಕಿಳಿಸಿದ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಆದೇಶವನ್ನು ಸುಪ್ರೀಂ ಕೋರ್ಟಿನ ಜಸ್ಟಿಸ್ ನವೀನ್ ಸಿನ್ಹಾ ಹಾಗೂ ಜಸ್ಟಿಸ್ ಆರ್ ಸುಭಾಷ್ ರೆಡ್ಡಿ ಅವರ ಪೀಠ ತಳ್ಳಿ ಹಾಕಿದೆ.
ಶಿಕ್ಷಕರ ನಿರ್ಲಕ್ಷ್ಯದಿಂದಾಗಿ ಅಪೀಲುದಾರೆ ಜೀವನಪರ್ಯಂತ ಕಷ್ಟ ಪಡುವಂತಾಗಿದೆ ಎಂದು ಹೇಳಿದ್ದ ರಾಜ್ಯ ಆಯೋಗ ಆಕೆಗೆ ಶಾಲೆ ರೂ 88,73,798, ಜತೆಗೆ ದೂರು ದಾಖಲಿಸಿದ ದಿನಾಂಕದಿAದ ಆದೇಶದ ದಿನಾಂಕದವರೆಗಿನ ಅವಧಿಗೆ ಶೇ9ರಷ್ಟು ಬಡ್ಡಿ ನೀಡಬೇಕೆಂದೂ ಸೂಚಿಸಿತ್ತು.
ಅಪೀಲುದಾರೆ ಅಕ್ಷತಾ ಬೆಂಗಳೂರಿನ ಬಿಎನ್‌ಎಂ ಪ್ರಾಥಮಿಕ ಮತ್ತು ಹೈಸ್ಕೂಲ್ ವಿದ್ಯಾರ್ಥಿನಿಯಾಗಿದ್ದ ವೇಳೆ ಡಿಸೆಂಬರ್ 2006ರಲ್ಲಿ ದಿಲ್ಲಿ ಸಹಿತ ವಿವಿಧ ಸ್ಥಳಗಳಿಗೆ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಗಿತ್ತು. ಆಗ 14 ವರ್ಷದವಳಾಗಿದ್ದ ಆಕೆ 9ನೇ ತರಗತಿಯಲ್ಲಿದ್ದರು. ಪ್ರವಾಸದ ಸಂದರ್ಭ ಆಕೆ ಅನಾರೋಗ್ಯಕ್ಕೀಡಾದಾಗ ತಕ್ಷಣ ವೈದ್ಯಕೀಯ ಸಹಾಯ ನೀಡದೇ ಇದ್ದುದರಿಂದ ಆಕೆಯ ಆರೋಗ್ಯ ಹದಗೆಟ್ಟಿತ್ತು ಕೊನೆಗೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆಗೆ ಅಕ್ಯೂಟ್ ಮೆನಿಂಜೋಸೆಫಾಲಿಟಿಸ್ ಎಂಬ ವೈರಲ್ ಜ್ವರವಿರುವುದು ದೃಢಪಟ್ಟಿತ್ತು, ಆಕೆಯನ್ನು ಬೇಗ ಆಸ್ಪತ್ರೆಗೆ ಕರೆತರುತ್ತಿದ್ದರೆ ಆಕೆಯನ್ನು ಗುಣಪಡಿಸಬಹುದಾಗಿತ್ತು ಎಂದು ವೈದ್ಯರು ಹೇಳಿದ್ದರು ಎಂದು ಆಕೆಯ ತಂದೆ ಹೇಳಿದ್ದರು.
ದಿಲ್ಲಿಯ ಆಸ್ಪತ್ರೆಯಲ್ಲಿ 53 ದಿನಗಳ ಕಾಲ ಚಿಕಿತ್ಸೆ ಪಡೆದು ನಂತರ ಆಕೆಯನ್ನು ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗಿತ್ತು ಸತತ ಚಿಕಿತ್ಸೆಯ ಹೊರತಾಗಿಯೂ ಆಕೆ ಹಾಸಿಗೆ ಹಿಡಿಯುವಂತಾಗಿದೆ. ಅನಾರೋಗ್ಯದಿಂದಾಗಿ ಆಕೆಯ ಸ್ಮರಣೆ ಮತ್ತು ಮಾತು ಕೂಡ ಬಾಧಿತವಾಗಿದೆ ಹಾಗೂ ಆಕೆಯ ಐಕ್ಯು 21 ತಿಂಗಳ ಮಗುವಿನ ಐಕ್ಯುವಿಗೆ ಹೋಲಿಸಬಹುದು ಎಂದು ಆಕೆಯ ತಂದೆ ಹೇಳಿದ್ದಾರೆ.

Latest Indian news

Popular Stories