ಮಾವಿನಕಾಯಿ ಕೀಳಲು ಹೋಗಿದ್ದಾಗ ವಿದ್ಯುತ್ ಸ್ಪರ್ಶದಿಂದ ವಿದ್ಯಾರ್ಥಿ ಸಾವು

ಹೊಸಕೋಟೆ (ಜೂ.10): ನಗರದ ಸಮಾಜ ಕಲ್ಯಾಣ ಇಲಾಖೆ ಕಚೇರಿ ಪಕ್ಕದಲ್ಲಿರುವ ಡಾ.ಬಿ. ಆರ್ ಅಂಬೇಡ್ಕರ್‌ ಸರ್ಕಾರಿ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸೂಲಿಬೆಲೆ ಹೋಬಳಿಯ ತಿಮ್ಮಪ್ಪನಹಳ್ಳಿ ಗ್ರಾಮದ ನಿವಾಸಿ ಸಾಯಿಭವನ್ (13) ಮೃತ ದುರ್ದೈವಿ.

ಮೃತ ಸಾಯಿಭವನ್ ನಗರದ ಬಾಲಕರ ಪ್ರೌಢಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡಿಕೊಂಡು ವಸತಿ ನಿಲಯದಲ್ಲಿ ವಾಸವಾಗಿದ್ದ. ಶನಿವಾರ ಸಂಜೆ ಬಟ್ಟೆ ಒಗೆದು ಮಹಡಿಯ ಮೇಲೆ ಒಣಗಿ ಹಾಕಿದ್ದ. ಭಾನುವಾರ ಬೆಳಗಿನ ಜಾವ 6 ಗಂಟೆಯಲ್ಲೇ ತನ್ನ ತಮ್ಮನಾದ ಸಾಯಿಕುಶಾಲ್‌ನನ್ನು ಕರೆದುಕೊಂಡು ಮಹಡಿಯ ಮೇಲೆ ಹೋಗಿ ಒಣಗಲು ಹಾಕಿದ್ದ ಬಟ್ಟೆಯನ್ನು ತೆಗೆದುಕೊಂಡು ನಂತರ ಪಕ್ಕದಲ್ಲೇ ಇದ್ದ ಮಾವಿನ ಮರದಲ್ಲಿ ಮಾವಿನ ಕಾಯಿ ಕೀಳಲು ಮಹಡಿಯ ಮೇಲೆ ಇದ್ದ ಕಬ್ಬಿಣದ ಸಲಾಕೆಯನ್ನು ತೆಗೆದುಕೊಂಡು ಹೋದ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾನೆ.

ಕಳೆದ ಎರಡು ವರ್ಷಗಳಿ೦ದ ವಿದ್ಯಾರ್ಥಿ ಸಾಯಿಭವನ್ ಇದೇ ವಸತಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ. ಕಳೆದ ಮೂರು ದಿನಗಳ ಹಿಂದೆ ಪೋಷಕರು ಆಗಮಿಸಿ ವಸತಿ ನಿಲಯಕ್ಕೆ ಬಿಟ್ಟು ಹೋಗಿದ್ದರು. ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಅನುರಾಧ, ಜಂಟಿ ನಿರ್ದೇಶಕ ದೇವ ರಾಜು, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೆಶಕ ಟಿಎಲ್‌ಎಸ್ ಪ್ರೇಮ, ಭೇಟಿ ನೀಡಿ ಪರಿಶೀಲಿಸಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದರು.

ಆಯುಕ್ತ ರಾಕೇಶ್ ಕುಮಾರ್‌ಮಾತನಾಡಿ, ಕಟ್ಟಡದ ಪಕ್ಕದಲ್ಲಿ ಹಾದುಹೋಗಿರುವ ವಿದ್ಯುತ್ ಲೈನ್ ಬದಲಾವಣೆಗೆ ಬೆಸ್ಕಾಂಗೆ ಮೂರು ಬಾರಿ ನಮ್ಮ ಇಲಾಖೆ ಸಿಬ್ಬಂದಿ ಪತ್ರ ಸಲ್ಲಿಸಿದ್ದರೂ ಬೆಸ್ಕಾಂ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಆದ್ದರಿಂದ ಮೃತರ ಕುಟುಂಬಕ್ಕೆ ನಮ್ಮ ಇಲಾಖೆ ಯಿಂದ 5 ಲಕ್ಷ ರು. ಕೊಡಿಸುವ ಭರವಸೆ ನೀಡಿದರು.

Latest Indian news

Popular Stories