ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ: ಪ್ರಲ್ಹಾದ್ ಜೋಶಿ ಆಕ್ಷೇಪ

ಬೆಂಗಳೂರು: ಕರ್ನಾಟಕದಲ್ಲಿ ಸ್ವತಃ ಉಪ ಮುಖ್ಯಮಂತ್ರಿ ಸೇರಿ ಹಲವಾರು ಶಾಸಕರು ಅಭಿವೃದ್ಧಿಗೆ ಅನುದಾನ ಇಲ್ಲ ಎಂದಿದ್ದಾರೆ. ಕಾಂಗ್ರೆಸ್ಸಿನ ಘೋಷಣೆಗಳು ಅರ್ಧಂಬರ್ಧ ಆಶ್ವಾಸನೆಗಳು. ಅವನ್ನು ಈಡೇರಿಸಲಾಗದೆ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಆಕ್ಷೇಪಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಬಜೆಟ್ 2.98 ಲಕ್ಷ ಕೋಟಿ ಇದ್ದು, ಫೆಬ್ರವರಿ ಮಧ್ಯಭಾಗಕ್ಕೆ ಬಂದರೂ ಶೇ 38 ರಷ್ಟು ಹಣ ವ್ಯಯಿಸದೆ ಬಾಕಿ ಇದೆ. 1.13 ಲಕ್ಷ ಕೋಟಿ ಹಣ ಖರ್ಚಾಗಿಲ್ಲ. ನಮ್ಮ ಕಡೆ ಒಮ್ಮೆ ಬಂದು ಚೆಕ್ ಮಾಡಿ ಎಂದರಲ್ಲದೆ, ನಮ್ಮಲ್ಲಿ ಪ್ರತಿ ತಿಂಗಳೂ ಪ್ರಧಾನಿಯವರು ಹಣ ಖರ್ಚಾದುದರ ಕುರಿತು ಸಭೆ ನಡೆಸುತ್ತಾರೆ. ಇಲ್ಲಿ ಮಾರ್ಚ್‍ನಲ್ಲಿ ಲೆಕ್ಕ ತೋರಿಸುತ್ತಾರಷ್ಟೇ ಎಂದು ಟೀಕಿಸಿದರು.

ಕೇಂದ್ರ ಪ್ರಾಯೋಜಿತ ವಿವಿಧ ಯೋಜನೆಗಳ ಶೇ 34 ರಷ್ಟು (5,727 ಕೋಟಿ ರೂ) ಹಣ ಖರ್ಚಾಗದೆ ಉಳಿದಿದೆ. ಇದು ರಾಜ್ಯ ಸರ್ಕಾರದ ಡ್ಯಾಶ್ ಬೋರ್ಡಿನ ಮಾಹಿತಿ ಎಂದು ತಿಳಿಸಿದರು. ಕೇಂದ್ರ ಸರ್ಕಾರ ರಾಜ್ಯದ ಕೃಷಿ ಇಲಾಖೆಗೆ ಕೊಟ್ಟ ಹಣವೂ ಸರಿಯಾಗಿ ಖರ್ಚಾಗಿಲ್ಲ. ಪಶು ಚಿಕಿತ್ಸಾಲಯ, ಪಶುಗಳಿಗೆ ಬೇಕಾದ ಔಷಧಿಗೆ ಬೇಡಿಕೆ ಇದೆ. ಆದರೆ, ಆ ಸಂಬಂಧ ಕೇಂದ್ರ ಕೊಟ್ಟ ಅನುದಾನವನ್ನು ಸರಿಯಾಗಿ ಬಳಸಿಲ್ಲ ಎಂದು ಆಕ್ಷೇಪಿಸಿದರು.

Latest Indian news

Popular Stories