ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣೆ ಕಾಯ್ದೆಯಡಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ 8 ತಿಂಗಳಿನಿಂದ ಬಂದಿರುವುದು ಕೇವಲ 2 ಪತ್ರ!

ಬೆಂಗಳೂರು: ಬಿಜೆಪಿ ಆಡಳಿತಾವಧಿಯಲ್ಲಿ ರಾಜ್ಯ ಸರ್ಕಾರ ಧಾರ್ಮಿಕ ಹಕ್ಕುಗಳ ರಕ್ಷಣೆ ಕಾಯ್ದೆ-2022 ನ್ನು ಜಾರಿಗೊಳಿಸಿದ ಬಳಿಕ  ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಗೆ ಮತಾಂತರಕ್ಕೆ ಅನುಮತಿ ಕೋರಿ ಕೇವಲ 2 ಅರ್ಜಿಗಳು ಮಾತ್ರ ಬಂದಿವೆ.
 
ನೂರ್ ಎಂಬ ಮುಸ್ಲಿಂ ಮಹಿಳೆ ಹಾಗೂ ಸಮದ್ ಎಂಬ ಓರ್ವ ಹಿಂದೂ ಇಬ್ಬರೂ ಮತಾಂತರಕ್ಕೆ ಅನುಮತಿ ನೀಡಬೇಕೆಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಮಾಡಿದ್ದಾರೆ. ನೂರ್ ಜು.10 ರಂದು ಅರ್ಜಿ ಸಲ್ಲಿಸಿದ್ದು, ತಮ್ಮ ನಾಲ್ಕು ಮಕ್ಕಳೊಂದಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ಸಮದ್ ಅವರು ಜು.06 ರಂದು ಅರ್ಜಿ ಸಲ್ಲಿಸಿದ್ದು ಇಸ್ಲಾಮ್ ಗೆ ಮತಾಂತರವಾಗಲು ಅನುಮತಿ ಕೋರಿದ್ದಾರೆ. 

ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆಎ ದಯಾನಂದ್ ಈ ಬಗ್ಗೆ ಟಿಎನ್ ಐಇ ಜೊತೆ ಮಾತನಾಡಿದ್ದು, “ನಾನು 8 ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡಾಗಿನಿಂದ ಧಾರ್ಮಿಕ ಮತಾಂತರವಾಗುವುದಕ್ಕೆ ಅನುಮತಿ ಕೋರಿ ಕೇವಲ 2 ಅರ್ಜಿಗಳನ್ನಷ್ಟೇ ಸ್ವೀಕರಿಸಿದ್ದೇನೆ. ಪ್ರಕರಣಗಳನ್ನು ಇತ್ಯರ್ಥಗೊಳಿಸುವುದಕ್ಕೂ ಮುನ್ನ ಎಲ್ಲಾ ನಿಯಮಗಳನ್ನು ಪಾಲಿಸಲಾಗಿದೆ”ಎಂದು ತಿಳಿಸಿದ್ದಾರೆ. 

ಇದನ್ನು ಜಿಲ್ಲಾಧಿಕಾರಿಗಳ ಕಚೇರಿಯ ಕೇಸ್ ವರ್ಕರ್ ಸಹ ಒಪ್ಪಿಕೊಂಡಿದ್ದಾರೆ. ನಿಯಮಗಳ ಪ್ರಕಾರ, ಅರ್ಜಿಗಳನ್ನು ನೊಟೀಸ್ ನಲ್ಲಿ ಹಾಕಿ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದಾದ ಬಳಿಕ ವ್ಯಕ್ತಿ ತನಗೆ ಇಚ್ಛೆ ಬಂದ ಧರ್ಮಕ್ಕೆ ಮತಾಂತರವಾಗಬಹುದಾಗಿದೆ.

ಈ ಬೆಳವಣಿಗೆಯ ನಂತರ, ಬೆಂಗಳೂರಿನ ಜಾಮಿಯಾ ಮಸೀದಿಯ ಪ್ರಧಾನರಾದ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ ಮಾತನಾಡಿ, “ಪ್ರತಿಯೊಂದು ಧರ್ಮವು ತನ್ನದೇ ಆದ ಮೌಲ್ಯ ವ್ಯವಸ್ಥೆಯನ್ನು ಹೊಂದಿದೆ ಮತ್ತು ಅದು ಇಸ್ಲಾಂ ಧರ್ಮಕ್ಕೂ ಅನ್ವಯಿಸುತ್ತದೆ, ಇಸ್ಲಾಮ್, ಸಮುದಾಯದ ಸದಸ್ಯರಿಗೆ ಉಡುಗೊರೆಯಾಗಿದೆ. ಆದರೆ ಆದರೆ ಒಬ್ಬ ವ್ಯಕ್ತಿಯು ಮತವನ್ನು ಬಿಡಲು ಬಯಸಿದರೆ ಅದು ಅವರ ವೈಯಕ್ತಿಕ ಆಯ್ಕೆಯಾಗಿದೆ ಎಂದು ಹೇಳಿದ್ದಾರೆ. 

ವಿಶ್ವ ಸನಾತನ ಪರಿಷತ್ತಿನ ಅಧ್ಯಕ್ಷ ಎಸ್.ಭಾಸ್ಕರನ್ ಮಾತನಾಡಿ, ನಿರ್ದಿಷ್ಟ ಧಾರ್ಮಿಕ ಪಂಗಡದ ಜನಸಂಖ್ಯೆಯನ್ನು ಹೆಚ್ಚಿಸುವ ಏಕೈಕ ಉದ್ದೇಶದಿಂದ ಮದುವೆ ಅಥವಾ ಆಮಿಷ ಸೇರಿದಂತೆ ವಂಚನೆಯ ಮಾರ್ಗಗಳೊಂದಿಗೆ ಯಾವುದೇ ಮತಾಂತರ ನಡೆಯಬಾರದು. ಯಾವುದೇ ಗುಪ್ತ ಅಜೆಂಡಾ ಇಲ್ಲದಿದ್ದರೆ ಜನರು ಮತಾಂತರಗೊಳ್ಳಲು ನಾವು ಅಡ್ಡಿಯಾಗುವುದಿಲ್ಲ ಎಂದು ಹೇಳಿದ್ದಾರೆ.

Latest Indian news

Popular Stories