ಸಿಎಂ ತವರು ಜಿಲ್ಲೆ ಪ್ರವೇಶಿಸಿದ ಬಿಜೆಪಿ-ಜೆಡಿಎಸ್ ಪಾದಯಾತ್ರೆ

ಕಾಂಗ್ರೆಸ್ ಸರ್ಕಾರದ ಮುಡಾ ಹಾಗೂ ವಾಲ್ಮೀಕಿ ಹಗರಣವನ್ನು ಖಂಡಿಸಿ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ವಾರದ ಹಿಂದೆ ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿದ್ದ ‘ಮೈಸೂರು ಚಲೋ’ ಪಾದಯಾತ್ರೆ ಶುಕ್ರವಾರ ಮೈಸೂರು ಜಿಲ್ಲೆಯನ್ನು ಪ್ರವೇಶಿಸಿದೆ.

ಬಿಜೆಪಿ – ಜೆಡಿಎಸ್ ನಾಯಕರು ಈ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಯುತ್ತಿದೆ.

ಮೈಸೂರು- ಬೆಂಗಳೂರು ರಸ್ತೆಯ ಲಕ್ಷ್ಮೀಪುರ ಗೇಟ್ ಬಳಿ ಬಿ.ವೈ.ವಿಜಯೇಂದ್ರ ಆಗಮಿಸಿದ ಒಂದೂವರೆ ಗಂಟೆಯ ಬಳಿಕ ಜೆಡಿಎಸ್ ಕಾರ್ಯಕರ್ತರು, ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ತಲುಪಿದರು. ಕಳೆದ ಶನಿವಾರ ಬೆಂಗಳೂರಿನಿಂದ ಆರಂಭಗೊಂಡ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್‌ನ ಜನಾಂದೋಲನ ಸಮಾವೇಶಕ್ಕೆ ಉತ್ತರ ನೀಡಲು ಮೈತ್ರಿ ಪಕ್ಷಗಳ ನಾಯಕರು ಸಜ್ಜಾಗಿದ್ದಾರೆ.

ಬಿಜೆಪಿ ನಾಯಕರು ಆಗಮಿಸುತ್ತಿದ್ದಂತೆ ರಸ್ತೆ ಬದಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು ಹೂ ಮಳೆ ಸುರಿಸಿದರೆ, ಕಾರ್ಯಕರ್ತರು 1 ಟನ್ ತೂಕದ ಸೇಬಿನ ಹಾರ ಹಾಕಿ ವಿಜಯೇಂದ್ರ ಅವರಿಗೆ ಜೈಕಾರ ಕೂಗಿದರು. ಎಲ್ಲ ನಾಯಕರಿಗೂ ಮೈಸೂರು ಮಲ್ಲಿಗೆ ಹೂವಿನ ಹಾರ ಹಾಕುವುದರೊಂದಿಗೆ ನಂಜನಗೂಡು ರಸಬಾಳೆ ಮತ್ತು ಮೈಸೂರು ಪಾಕ್ ತಿನ್ನಿಸಲಾಯಿತು. ಮಹಿಳಾ ಕಾರ್ಯಕರ್ತೆಯರು ನಾಯಕರಿಗೆ ಕಂಕಣ ಕಟ್ಟಿ, ಪೂರ್ಣಕುಂಭ ಸ್ವಾಗತ ಕೋರಿದರು.

ಪ್ರಾರಂಭದಲ್ಲಿ ಒಟ್ಟಿಗೆ ಪಾದಯಾತ್ರೆ ಆರಂಭಿಸಿದ್ದ ಬಿಜೆಪಿ -ಜೆಡಿಎಸ್ ಕಾರ್ಯಕರ್ತರು, ಶ್ರೀರಂಗಪಟ್ಟಣದಿಂದ ಮೈಸೂರಿಗೆ ಪ್ರತ್ಯೇಕವಾಗಿ ಆಗಮಿಸಿದರು. ಮೊದಲು ಬಿಜೆಪಿ ನಾಯಕರು ಪಾದಯಾತ್ರೆಯ ಮೂಲಕ ಆಗಮಿಸಿದರೆ ನಂತರ ಜೆಡಿಎಸ್ ನಾಯಕರು ಆಗಮಿಸಿದರು. ಆದರೆ, ಮಧ್ಯಾಹ್ನ ಊಟಕ್ಕೆ ಒಂದೆಡೆ ಸೇರಿದರು. ಮಂಡ್ಯದ ಮಾರ್ಗದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರುತ್ತಿದ್ದರಿಂದ ಪಾದಯಾತ್ರೆ ವಿಳಂಬವಾಗಬಾರದು ಎಂದು ಬಿಜೆಪಿ ನಾಯಕರು ಮೊದಲು ಪಾದಯಾತ್ರೆ ಆರಂಭಿಸಿದ್ದರು ಎನ್ನಲಾಗಿದೆ.

Latest Indian news

Popular Stories