6 ರಾಷ್ಟ್ರಗಳಿಗೆ 99,500 ಟನ್‌ ಈರುಳ್ಳಿ ರಫ್ತು ಮಾಡಲು ಅನುಮಾತಿ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಧಾರಣೆ ಕುಸಿದಿರುವ ಬೆನ್ನಲ್ಲೇ ನೆರೆಯ ಆರು ರಾಷ್ಟ್ರಗಳಿಗೆ 99,500 ಟನ್‌ ಈರುಳ್ಳಿ ರಫ್ತು ಮಾಡಲು ಕೇಂದ್ರ ಸರ್ಕಾರವು ಶನಿವಾರ ಅನುಮತಿ ನೀಡಿದೆ.

ಅಲ್ಲದೆ, ಮಧ್ಯಪ್ರಾಚ್ಯ ಹಾಗೂ ಯುರೋಪ್‌ನ ಕೆಲವು ದೇಶಗಳಿಗೆ ಎರಡು ಸಾವಿರ ಟನ್‌ನಷ್ಟು ಬಿಳಿ ಈರುಳ್ಳಿ ರಫ್ತಿಗೂ ಒಪ್ಪಿಗೆ ಸೂಚಿಸಿದೆ.

2023-24ನೇ ಸಾಲಿನ ಖಾರೀಫ್‌ ಮತ್ತು ರಾಬಿ ಅವಧಿಯಲ್ಲಿ ಉತ್ಪಾದನೆ ಕುಸಿತ ಹಾಗೂ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಿಸುವ ನಿಟ್ಟಿನಲ್ಲಿ ಕಳೆದ ಡಿಸೆಂಬರ್‌ 8ರಂದು ಈರುಳ್ಳಿ ರಫ್ತಿಗೆ ನಿರ್ಬಂಧ ಹೇರಿತ್ತು.

‘ಸದ್ಯ ದ್ವಿಪಕ್ಷೀಯ ಒಪ್ಪಂದದ ಅನುಸಾರ ಬಾಂಗ್ಲಾದೇಶ, ಯುಎಇ, ಭೂತಾನ್‌, ಬಹೆರೈನ್, ಮಾರಿಷಸ್ ಹಾಗೂ ಶ್ರೀಲಂಕಾಕ್ಕೆ ರಫ್ತು ಮಾಡಲು ಅನುಮತಿ ನೀಡಲಾಗಿದೆ. ಮಹಾರಾಷ್ಟ್ರದಿಂದ ಇಷ್ಟು ಪ್ರಮಾಣದ ಈರುಳ್ಳಿಯನ್ನು ರಫ್ತು ಮಾಡಲಾಗುತ್ತದೆ’ ಎಂದು ಕೇಂದ್ರ ಗ್ರಾಹಕ ಸಚಿವಾಲಯವು ತಿಳಿಸಿದೆ.

‘ಇ-ವೇದಿಕೆಗಳ ಮೂಲಕ ಕಡಿಮೆ ಬೆಲೆಯಲ್ಲಿ ಈ ದೇಶಗಳಿಗೆ ಈರುಳ್ಳಿ ರಫ್ತು ಮಾಡಲು ಕೇಂದ್ರದ ಏಜೆನ್ಸಿಯಾದ ನ್ಯಾಷನಲ್ ಕೋ ಆಪರೇಟಿವ್ ಎಕ್ಸ್‌ಪೋರ್ಟ್ಸ್ ಲಿಮಿಟೆಡ್‌ (ಎನ್‌ಸಿಇಎಲ್‌) ಕ್ರಮವಹಿಸಿದೆ’ ಎಂದು ಮೂಲಗಳು ತಿಳಿಸಿವೆ.

ಮಿತ್ರ ರಾಷ್ಟ್ರಗಳಿಗೆ ಈರುಳ್ಳಿ ಪೂರೈಸಲು ಕೇಂದ್ರವು ಸೂಚಿಸಿರುವ ಏಜೆನ್ಸಿಗಳಿಗೆ ಎನ್‌ಸಿಇಎಲ್‌ನಿಂದ ಶೇ 100ರಷ್ಟು ಮುಂಗಡ ಪಾವತಿ ಆಧಾರದ ಮೇಲೆ ಈರುಳ್ಳಿಯನ್ನು ಪೂರೈಸಲಾಗುತ್ತದೆ.

Latest Indian news

Popular Stories