ಪದತ್ಯಾಗಕ್ಕೆ ಸಿದ್ಧರಾದರಾ ಸಿಎಂ ಯಡಿಯೂರಪ್ಪ ?

ಬೆಂಗಳೂರು: ಪಕ್ಷದ ವರಿಷ್ಠರು ಏನು ಸೂಚನೆ ಕೊಡುತ್ತಾರೋ ಅದರಂತೆ ನಾನು ನಡೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪರೋಕ್ಷವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆಯೇ ?
ಸಿಎಂ ಆಪ್ತ ವಲಯದಲ್ಲಿ ನಡೆಯುತ್ತಿರುವ ಚರ್ಚೆಯ ಪ್ರಕಾರ ಹೌದು. ಯಡಿಯೂರಪ್ಪ ಅವರು ಪದ ತ್ಯಾಗಕ್ಕೆ ಸಿದ್ಧರಾಗಿದ್ದಾರೆ. ಕಳೆದ ಎರಡು ವಾರಗಳಿಂದ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆಗಳಿಗೆ ಸ್ವತಃ ಸಿಎಂ ಅವರೇ ಮೌನ ಮುರಿದು ನಾಯಕತ್ವ ಬದಲಾವಣೆಗೆ ಇದ್ದ ಗೊಂದಲಗಳಿಗೆ ಪೂರ್ಣ ವಿರಾಮ ಹಾಕಿದ್ದಾರೆ. ಇದೇ 25ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಯಾವ ಸಂದೇಶ ಕೊಡುತ್ತಾರೋ ಅದನ್ನು ಪಾಲಿಸುತ್ತೇನೆ. ಹೈಕಮಾಂಡ್ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾನು ಬದ್ದನಾಗಿರುತ್ತೇನೆ ಎನ್ನುವ ಮೂಲಕ ಪದತ್ಯಾಗದ ಮುನ್ಸೂಚನೆ ನೀಡಿದ್ದಾರೆ.
ಬೆಂಗಳೂರಿನ ಕಾರಚಾರಕನಹಳ್ಳಿಯ ಕೋದಂಡರಾಮ ದೇವಸ್ಥಾನದಲ್ಲಿ ಲೋಕಕಲ್ಯಾಣಕ್ಕಾಗಿ ನಡೆಸಿದ ಧನ್ವಂತರಿ ಯಾಗದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವುದು ಖಚಿತ ಎಂಬ ಸೂಚ್ಯವಾಗಿ ಹೇಳಿದರು.
ಇಡೀ ದೇಶದಲ್ಲೇ 75 ವರ್ಷ ಮೀರಿದ ಯಾರಿಗೂ ಕೂಡ ಅಧಿಕಾರ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನನ್ನ ಬಗ್ಗೆ ವಿಶೇಷ ಕಾಳಜಿ ತೋರಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಅವಕಾಶ ಕೊಟ್ಟಿದ್ದಾರೆ. ಇದಕ್ಕಾಗಿ ನಾನು ಆಭಾರಿಯಾಗಿರುತ್ತೇನೆ ಎಂದು ತಿಳಿಸಿದರು.
ಜುಲೈ 26ರಂದು ನಮ್ಮ ಪಕ್ಷ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸುತ್ತದೆ. 25ರಂದು ವರಿಷ್ಠರು ಏನು ಸೂಚನೆ ಕೊಡುತ್ತಾರೋ ನನಗೆ ಗೊತ್ತಿಲ್ಲ. ಏನೇ ಸೂಚನೆ ಕೊಟ್ಟರೂ ಅದನ್ನು ಪಾಲಿಸುತ್ತೇನೆ ಎಂದು ಹೇಳಿದರು.
ಹೈಕಮಾಂಡ್ ಯಾವ ಸಂದೇಶ ನೀಡುತ್ತದೆ ಎಂಬುದು ಈ ಕ್ಷಣದವರೆಗೂ ನನಗೆ ಗೊತ್ತಿಲ್ಲ. ಪಕ್ಷದ ಶಿಸ್ತಿನ ಸಿಪಾಯಿ ಆಗಿ ನಾನು ನಡೆದುಕೊಳ್ಳುವುದು ನನ್ನ ಕರ್ತವ್ಯ. ನನ್ನಂತಹ ಅದೃಷ್ಟಶಾಲಿ ಯಾರೂ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 26ರಂದು ಸರ್ಕಾರದ ಸಾಧನೆಗಳನ್ನು ಹೊತ್ತ ಕಾರ್ಯಕ್ರಮವನ್ನು ನಡೆಸಲಿದ್ದೇವೆ. ಬಳಿಕ ವರಿಷ್ಠರಿಂದ ಏನು ಸೂಚನೆ ಬರುತ್ತದೆಯೋ ಅದನ್ನು ಪಾಲನೆ ಮಾಡುತ್ತೇನೆ ಎಂದರು.
`ನನ್ನ ಪರವಾಗಿ ರಾಜ್ಯದ ಯಾವ ಭಾಗದಲ್ಲೂ ನನ್ನ ಹಿತೈಷಿಗಳು, ಅಭಿಮಾನಿಗಳು, ಕಾರ್ಯಕರ್ತರು ಸೇರಿದಂತೆ ಯಾರೊಬ್ಬರೂ ಪಕ್ಷದ ಆದೇಶಕ್ಕೆ ವಿರುದ್ಧವಾಗಿ ಪ್ರತಿಭಟನೆ ನಡೆಸಬಾರದು’ ಎಂದು ಯಡಿಯೂರಪ್ಪ ಮನವಿ ಮಾಡಿದರು. ನನಗೆ ಬೆಂಬಲ ನೀಡಿದ ಮಠಾಧೀಶರಿಗೆ ಧನ್ಯವಾದ. ರಾಜ್ಯದ ವಿವಿಧ ಮಠಾಧೀಶರು ನನಗೆ ತೋರಿಸಿದ ವಿಶೇಷ ಕಾಳಜಿಗೆ ಆಭಾರಿಯಾಗಿದ್ದೇನೆ. ದಯವಿಟ್ಟು ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ಪ್ರತಿಭಟನೆ ಮಾಡಬಾರದು ಎಂದು ಕೋರಿದರು.
ಮುಂದಿನ ದಿನಗಳಲ್ಲಿ ಪಕ್ಷವನ್ನು ಸದೃಢಗೊಳಿಸಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಮುಂದಿನ ಗುರಿ. ಪಕ್ಷವನ್ನು ಮತ್ತಷ್ಟು ಸಂಘಟಿಸುತ್ತೇನೆ. ನನ್ನ ಪರವಾಗಿ ಯಾರೊಬ್ಬರೂ ಹೇಳಿಕೆಗಳನ್ನು ಕೊಡುವುದು ಬೇಡ. ನನಗೆ ಉತ್ತಮ ರೀತಿಯಲ್ಲಿ ಸಹಕಾರ ಕೊಡಬೇಕು ಎಂದು ಮನವಿ ಮಾಡಿಕೊಂಡರು.

Latest Indian news

Popular Stories