ಉಡುಪಿ-ಚಿಕ್ಕಮಗಳೂರು ಕ್ಷೇತ್ರ: ಯಾರೂ ಗೆದ್ದರೂ ಅಲ್ಪ ಅಂತರ – ಇದು ಸದ್ಯದ‌ ಸಾರ್ವಜನಿಕ ಚರ್ಚೆ!

ಎಪ್ರಿಲ್ 26 ರಂದು ಬಿಜೆಪಿಯ ಭದ್ರ ಕೋಟೆ ಎನಿಸಿದ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಈ ಬಾರಿ ಬಹಳ ಚರ್ಚೆಯಲ್ಲಿದೆ. 2019 ರಲ್ಲಿ ಮೂರು ಲಕ್ಷಕ್ಕಿಂತ ಅಧಿಕ ಮತಗಳಿಂದ ಗೆದ್ದಿದ್ದ ಬಿಜೆಪಿ ಈ ಬಾರಿ 50-50 ಸ್ಥಿತಿಯಲ್ಲಿದೆ ಎಂಬುವುದು ಈಗಿನ ವಿಶ್ಲೇಷಣೆ.

ಯಾವುದನ್ನೂ ಸ್ಪಷ್ಟವಾಗಿ ಊಹಿಸದಷ್ಟೂ ಫೈಟ್ ಈ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ. ಉಡುಪಿ ಜಿಲ್ಲೆ ನಾಲ್ಕು ವಿಧಾನ ಸಭಾ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿ ಮತ್ತು ಚಿಕ್ಕಮಗಳೂರು ನಾಲ್ಕು ವಿಧಾನ ಸಭಾ ಕ್ಷೇತ್ರ ಕಾಂಗ್ರೆಸ್ ತೆಕ್ಕೆಯಲ್ಲಿದ್ದು ಯಾರೂ ಗೆದ್ದರೂ ಅಲ್ಪ ಮತದ ಅಂತರದಿಂದ ಮಾತ್ರ ಎಂಬ ಮಾತುಗಳು ರಾಜಕೀಯ ವಲಯದಿಂದ ಕೇಳಿ ಬರುತ್ತಿದೆ.

ಚುನಾವಣೆ ಮುಗಿದ ದಿನದಿಂದಲೇ ಎರಡೂ ಪಕ್ಷದ ನಾಯಕರು ಪ್ರತಿ ಬೂತ್‌ಗಳಿಂದ ತಮ್ಮ ಪಕ್ಷದ ಕಾರ್ಯಕರ್ತರಿಂದ ಮಾಹಿತಿ ಪಡೆದು ಕೊಂಡು ಯಾವ ವಿಧಾನಸಭಾ ಕ್ಷೇತ್ರದ ಯಾವ ಬೂತ್‌ನಲ್ಲಿ ತಮ್ಮ ಪಕ್ಷಕ್ಕೆ ಎಷ್ಟೆಷ್ಟು ಮತ ಬಂದಿರಬಹುದು ಎಂಬುದರ ಲೆಕ್ಕಾಚಾರ ಹಾಕಿದ್ದಾರೆ. ಎಲ್ಲ ಬೂತ್‌ಗಳ ಅಂದಾಜು ಮತ ಗಳನ್ನು ಕ್ರೋಡೀಕರಿಸಿಕೊಂಡು, ಜಾತಿ ಲೆಕ್ಕಾಚಾರದಲ್ಲಿ ನಿರ್ದಿಷ್ಟ ಮತಗಳ ಅಂತರದ ಗೆಲವು ಬರಲಿದೆ ಎಂಬುದನ್ನು ಎರಡೂ ಪಕ್ಷಗಳಲ್ಲೂ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ. ಬೂತ್‌ಗಳಿಂದ ಬಂದಿರುವ ಮಾಹಿತಿ ಪಕ್ಷಗಳ ಲೆಕ್ಕಾಚಾರದ ಪ್ರಕಾರ ಪಕ್ಕ ಇರಲಿದೆ. ಹೀಗಾಗಿ ಎರಡೂ ಪಕ್ಷಗಳು ಗೆಲುವಿನ ನಿರೀಕ್ಷೆಯಲ್ಲಿವೆ.

ರಾಜ್ಯ ಸರಕಾರದ 5 ಗ್ಯಾರಂಟಿ ಒಂದು ಕಡೆಯಾದರೆ ಮೋದಿಯೇ ಗ್ಯಾರಂಟಿ ಇನ್ನೊಂದು ಕಡೆ ಪ್ರಚಾರದಲ್ಲಿ ಹೆಚ್ಚು ಬಳಕೆಯಾಗಿತ್ತು. ಈಗ ಎಲ್ಲೆಡೆ ಯಾರು ಗೆಲ್ಲಲಿದ್ದಾರೆ ಎಂಬ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಬಿಜೆಪಿ ಪಡಸಾಲೆಯಿಂದ ಕೋಟ ಶ್ರೀನಿವಾಸ ಪೂಜಾರಿ ಜಯ ಸಾಧಿಸಲಿದ್ದಾರೆ ಎಂಬ ಧ್ವನಿ ಕೇಳಿಬಂದರೆ, ಕಾಂಗ್ರೆಸ್‌ ಪಡಸಾಲೆಯಿಂದ ಜಯಪ್ರಕಾಶ್‌ ಹೆಗ್ಡೆಯವರು ಜಯ ಸಾಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸಾರ್ವಜನಿಕವಾಗಿ ಬಸ್‌ ನಿಲ್ದಾಣ, ಶಾಪಿಂಗ್‌ ಮಾಲ್‌ ಇತ್ಯಾದಿ ಕಡೆಗಳಲ್ಲಿ ಇಬ್ಬರಿಗೂ ಅವಕಾಶ ಇದೆ ಎಂಬುದು ಕೇಳ ಸಿಗುತ್ತಿದೆ.

ಈ ಎಲ್ಲದರ ಮಧ್ಯೆ ರಾಜ್ಯ ಸರಕಾರದ ಗ್ಯಾರಂಟಿ, ಮೋದಿ ಅಲೆ, ಹಿಂದುತ್ವ ಇತ್ಯಾದಿಗಳು ಹೇಗೆ ಮತವಾಗಿ ಪರಿವರ್ತನೆಯಾಗಿದೆ ಎಂಬುದೂ ಮುಖ್ಯವಾಗುತ್ತದೆ. ಅಥವಾ ಸ್ಥಳೀಯ ಅಭ್ಯರ್ಥಿಗಳ ಸಾಮರ್ಥ್ಯ, ಅಭಿವೃದ್ಧಿ ಮಾಡಿದ ಹಿನ್ನಲೆ ನೋಡಿ ಮತ ಚಲಾಯಿಸಲಾಗಿದೆಯೇ ಎಂಬುವುದು ಕೂಡ ಫಲಿತಾಂಶದಲ್ಲಿ ಪರಿಣಾಮ ಬೀರಲಿದೆ.

ಚುನಾವಣ ಕಣದಿಂದ ಯಾರು ಸಂಸತ್ ಭವನ ಪ್ರವೇಶಿಸಲಿದ್ದಾರೆ ಎನ್ನುವುದು ಜೂ. 4ರಂದು ತಿಳಿಯಲಿದೆ. ಅಲ್ಲಿಯವರೆಗೂ ಕಾಯಲೇ ಬೇಕಾಗಿದೆ.

Latest Indian news

Popular Stories