ಪ್ರತಿ ಗ್ರಾ.ಪಂ. ಗೆ 100 ಮನೆ: ಸುನೀಲಗೌಡ ಪಾಟೀಲ

ವಿಜಯಪುರ: ಪ್ರತಿಯೊಂದು ಗ್ರಾಮ ಪಂಚಾಯಿತಿಗಳಿಗೆ ತಲಾ 100 ಮನೆಗಳನ್ನು ಮಂಜೂರು ಮಾಡುವಂತೆ ವಸತಿ ಸಚಿವ ಬಿ.ಜಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ಮನವಿ ಮಾಡಲಾಗಿದ್ದು, ಶೀಘ್ರದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ವಿಧಾನ ಪರಿಷತ ಸದಸ್ಯ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಇತ್ತೀಚೆಗೆ ನಡೆದ ಬೆಳಗಾವಿ ಅಧಿವೇಶನದಲ್ಲಿ ನಾನಾ ವಸತಿ ಯೋಜನೆಗಳಡಿ ನಿರ್ಮಿಸಲಾದ ಮನೆಗಳ ಬಗ್ಗೆ ನಾನು ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ್ದೆ. ಅಲ್ಲದೇ, ಚರ್ಚೆಯ ಸಂದರ್ಭದಲ್ಲಿ ಕಳೆದ ಐದು ವರ್ಷಗಳಲ್ಲಿ ಕೇವಲ 50ಕ್ಕಿಂತ ಕಡಿಮೆ ಮನೆಗಳನ್ನು ನೀಡಲಾಗಿದೆ.

ಅಲ್ಲದೇ, ವಸತಿ ರಹಿತರಿಗೆ ನಿವೇಶನ ನೀಡುವ ಕೆಲಸವಾಗಿಲ್ಲ ಎಂದು ಸಚಿವರ ಗಮನ ಸೆಳೆದಿದ್ದೆ. ಈ ಆರ್ಥಿಕ ವರ್ಷದಲ್ಲಿ ಕನಿಷ್ಠ ತಲಾ 100 ಮನೆಗಳನ್ನು ಪ್ರತಿಯೊಂದು ಗ್ರಾಮ ಪಂಚಾಯಿತಿಗಳಿಗೆ ಮಂಜೂರು ಮಾಡುವಂತೆ ಆಗ್ರಹಿಸಿದ್ದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು ಶೀಘ್ರವೇ ಗ್ರಾಮ ಪಂಚಾಯಿತಿಗಳಿಗೆ ಮನೆಗಳನ್ನು ಮಂಜೂರು ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.

ನಾನು ವಿಧಾನ ಮಂಡಲದ ಅಧಿವೇಶನದಲ್ಲಿ ಗ್ರಾ.ಪಂ. ಸದಸ್ಯರ ಮಾಸಿಕ ಗೌರವಧನ ಹೆಚ್ಚಳ, ಉಚಿತ ಬಸ್ ಪಾಸ್, ಪಿಂಚಣಿ ಸೇರಿದಂತೆ ನಾನಾ ಬೇಡಿಕೆಗಳ ಕುರಿತು ಸದನದ ಒಳಗೆ ಮತ್ತು ಹೊರಗೆ ಸರಕಾರದ ಗಮನ ಸೆಳೆದಿದ್ದೇನೆ. ಇದರ ಪರಿಣಾಮ ಸರಕಾರ ಗ್ರಾ. ಪಂ. ಅಧ್ಯಕ್ಷರಿಗೆ ರೂ. 6000, ಉಪಾಧ್ಯಕ್ಷರಿಗೆ ರೂ. 4000 ಹಾಗೂ ಸದಸ್ಯರಿಗೆ ರೂ. 2000 ಗೌರವಧನ ನಿಗದಿ ಮಾಡಿದೆ.

ಇನ್ನುಳಿದ ಬೇಡಿಕೆಗಳಾದ ಗ್ರಾ. ಪಂ. ಸದಸ್ಯರಿಗೆ ಉಚಿತ ಬಸ್ ಪಾಸ್, ಪಿಂಚಣಿ ಸೌಲಭ್ಯ, ಜೀವವಿಮೆ, ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಕೇರಳ ಮಾದರಿಯಲ್ಲಿ ಸರಕಾರಿ ಸೌಲಭ್ಯ ಒದಗಿಸುವಂತೆ ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಸರಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ಮತ್ತು ಶಿಥಿಲಗೊಂಡಿರುವ ಶಾಲಾ ಕಟ್ಟಡಗಳ ಕುರಿತು ಕೂಡ ವಿಧಾನ ಮಂಡಲದ ಒಳಗೆ ಮತ್ತು ಹೊರಗೆ ಸರಕಾರದ ಗಮನ ಸೆಳೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ.
ಅಷ್ಟೇ ಅಲ್ಲ, ನಾನಾ ವಸತಿ ಯೋಜನೆಗಳ ಕುರಿತು ಕೂಡ ಸರಕಾರದ ಗಮನ ಸೆಳೆದು ಸಕಾಲದಲ್ಲಿ ವಸತಿ ಯೋಜನೆಯ ಫಲಾನುಭವಿಗಳಿಗೆ ಹಣ ಪಾವತಿಸುವಂತೆ ಸರಕಾರದ ಮನವೊಲಿಸಿದ್ದೇನೆ.

ಬೇರೆ ಬೇರೆ ಕಾರಣಗಳಿಂದ ಬ್ಲಾಕ್ (ತಡೆ ಹಿಡಿಯಲಾದ) ಮಾಡಲಾದ ಮನೆಗಳನ್ನು ಕಟ್ಟಿಕೊಳ್ಳಲು ಬ್ಲಾಕ್ ತೆರವುಗೊಳಿಸುವಂನೆ ನಾನು ಮಾಡಿದ ಪ್ರಯತ್ನ ಫಲ ನೀಡಿದ್ದು, ಈಗ ಬ್ಲಾಕ್ ತೆರವು ಮಾಡಲಾಗಿದೆ ಎಂದರು.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಕಾಲಕ್ಕೆ ಕೂಲಿ ಪಾವತಿಸುವಂತೆಯೂ ಮನವಿ ಮಾಡಿದ್ದೇನೆ. 15ನೇ ಹಣಕಾಸು ಯೋಜನೆಯ ಹಣವನ್ನು ಗ್ರಾ.ಪಂ. ಗಳು ಬಳಕೆ ಮಾಡಲು ಅವಕಾಶ ನೀಡುವಂತೆ ಸರಕಾರವನ್ನು ಒತ್ತಾಯಿಸಿದ್ದೇನೆ. ಗ್ರಾ. ಪಂ. ಸಿಬ್ಬಂದಿಗೆ ಕನಿಷ್ಠ ವೇತನ, ತುಟ್ಟಿ ಭತ್ಯೆ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಲು ಮತ್ತು ಸಕಾಲಕ್ಕೆ ವೇತನ ಪಾವತಿಸವಂತೆ ಸರಕಾರದ ಮೇಲೆ ಒತ್ತಡ ತಂದಿದ್ದೇನೆ.

ಅಲ್ಲದೇ, ಗ್ರಾ. ಪಂ. ಸದಸ್ಯರ ಮತ್ತು ಗ್ರಾಮಗಳ ಅಭಿವೃದ್ಧಿಗೆ ಸದಾ ಬದ್ಧನಾಗಿದ್ದೇನೆ ಎಂದು ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.

Latest Indian news

Popular Stories