2024 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ನಿಜ ಬಣ್ಣ ಬಯಲಾಗಿದೆ’

ಬೆಂಗಳೂರು, ಮೇ 02: ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಾವು ಜೋರಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ ಭರವಸೆಗಳನ್ನು ಈಡೇರಿಸದಿರುವುದು ಹಾಗೂ ಭಾವನಾತ್ಮಕ ವಿಚಾರಗಳನ್ನು ಕೆರಳಿಸಿ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದು, 2024 ರ ಲೋಕಸಭಾ ಚುನಾವಣೆಯಲ್ಲಿ ಅವರ ನಿಜ ಬಣ್ಣ ಬಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್‌ ಮೂಲಕ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯ ಅವರು, 2014 ರಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಲು ಆಗಲಿಲ್ಲ. ಸುಳ್ಳು ಭರವಸೆಗಳನ್ನು ನೀಡಿ ಪ್ರಧಾನ ಮಂತ್ರಿಯಾಗಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರನ್ನು ನಂಬಿ ಜನರು ಮತ ನೀಡಿದ್ದರು.

2019 ರಲ್ಲಿ ಸಂವಿಧಾನದ ಆರ್ಟಿಕಲ್‌ 370 ರದ್ದತಿ, ಪುಲ್ವಾಮಾ ದಾಳಿಯಂತಹ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದರು. ಆದರೆ 2024 ರಲ್ಲಿ ಮತ್ತೆ ಜನರ ದಾರಿ ತಪ್ಪಿಸಲು ಸಾಧ್ಯವಿಲ್ಲ. ಇದು ಬಹಳ ಮಹತ್ವದ ಚುನಾವಣೆ ಎಂದು ತಾವೆಲ್ಲ ಅರ್ಥ ಮಾಡಿಕೊಂಡಿದ್ದೀರಿ.

ಮುಂದಿನ ಐದು ವರ್ಷ ಯಾವ ಪಕ್ಷ ಅಧಿಕಾರದಲ್ಲಿರಬೇಕು, ದೇಶದ ಭವಿಷ್ಯವನ್ನು ಯಾರು ನಿರ್ಮಾಣ ಮಾಡುತ್ತಾರೆ, ಈ ದೇಶದ ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ರೈತರು, ಮಹಿಳೆಯರು ಕಾರ್ಮಿಕರು- ಇವೆರೆಲ್ಲರಿಗೆ ಆರ್ಥಿಕ ಸಾಮಾಜಿಕ ಶಕ್ತಿ ಕೊಡುತ್ತಾರೆ, ಯಾರು ಮಾತುಕೊಟ್ಟಂತೆ ನಡೆದುಕೊಳ್ಳುತ್ತಾರೆ, ಯಾರು ನಡೆದುಕೊಳ್ಳುವುದಿಲ್ಲ ಎಂಬುದನ್ನು ಪರಿಶೀಲನೆ ಮಾಡಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.

Latest Indian news

Popular Stories