ಬಿಜೆಪಿಗೆ ಸೋಲಿನ ಭೀತಿಯಿಂದ ಐಟಿ, ಇಡಿ ಅಸ್ತ್ರ ಪ್ರಯೋಗ: ಡಿ.ಕೆ.ಸುರೇಶ್

ರಾಮನಗರ (ಏ.18): ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಬಿಜೆಪಿ ಐಟಿ, ಇಡಿ ಹಾಗೂ ಸಿಬಿಐ ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿ ಉಪಯೋಗಿಸುತ್ತಿದೆ. ಈ ಪ್ರಯೋಗಗಳು ಪ್ರತಿ ಚುನಾವಣೆಯಲ್ಲೂ ನಡೆಯುತ್ತಿದ್ದು, ನಮಗಿದು ಹೊಸತಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಕಿಡಿಕಾರಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್ ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಬಳಿ ಇರುವ ಅಸ್ತ್ರ ಅದೊಂದೆ. ಅವರಿಗೆ ಸೋಲಿನ ಭೀತಿ ಕಾಡುತ್ತಿದ್ದು, ಐಟಿ, ಇಡಿ, ಸಿಬಿಐ ಬಿಟ್ಟು ಅವರಿಗೆ ಬೇರೆ ಗೊತ್ತಿಲ್ಲ. ಪ್ರಧಾನಮಂತ್ರಿಗಳಿಗೆ, ಬಿಜೆಪಿ ನಾಯಕರಿಗೆ ಬೆಲೆ ಏರಿಕೆ ಬಗ್ಗೆ ಮಾತನಾಡಲು ಹೇಳಿ. 10 ವರ್ಷಗಳ ಹಿಂದೆ ಅವರು ನೀಡಿರುವ ಹೇಳಿಕೆ, ಕೊಟ್ಟಿರುವ ವಚನಗಳ ಬಗ್ಗೆ ಇಂದು ಅವರು ಏನು ಹೇಳುತ್ತಾರೆ ಕೇಳಿ. ಅವರಿಂದ ಶ್ರೀರಾಮನವಮಿ ದಿನ ಈ ವಿಚಾರವಾಗಿ ಸತ್ಯ ಹೇಳಿಸಿ ಎಂದರು.

ಅವರು ಏನಾದರೂ ಮಾಡಿ ನಮ್ಮ ನಾಯಕರನ್ನು ಕುಗ್ಗಿಸಬೇಕು ಎನ್ನುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಯತ್ನಗಳು ಯಾವುದೂ ಯಶಸ್ಸಾಗುವುದಿಲ್ಲ. ಐಟಿ, ಇಡಿ, ಸಿಬಿಐ ಅಧಿಕಾರಿಗಳು ಬಿಜೆಪಿಯ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷ ಕಟ್ಟಿಹಾಕಿ ಸೋಲಿಸಲು ಬಂದಿದ್ದಾರೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ

ಕೇಜ್ರಿವಾಲ್ ಅವರು ಪ್ರತಿ ಹಂತದಲ್ಲಿ ಬಿಜೆಪಿ ವಿರುದ್ಧ ಹೋರಾಡುತ್ತಾ ದೆಹಲಿ ಹಾಗೂ ಪಂಜಾಬ್ ನಲ್ಲಿ ಜನಪರ ಕಾರ್ಯಕ್ರಮಗಳನ್ನು ನೀಡಿ ಉತ್ತಮ ಆಡಳಿತ ನೀಡಿ ಜನಮನ್ನಣೆ ಗಳಿಸಿದ್ದಾರೆ. ಅವರು ಎಲ್ಲಿ ತಮ್ಮ ಪ್ರಾಬಲ್ಯ ವಿಸ್ತರಿಸುತ್ತಾರೋ ಎಂಬ ಕಾರಣಕ್ಕೆ ಅವರ ವಿರುದ್ಧ ಇಡಿ, ಸಿಬಿಐ ತನಿಖಾ ಸಂಸ್ಥೆಗಳ ಮೂಲಕ ಅವರನ್ನು ವಶಕ್ಕೆ ಪಡೆದು ಜೈಲಿಗೆ ಕಳಿಸಿದ್ದಾರೆ ಎಂದು ಆರೋಪಿಸಿದರು.

Latest Indian news

Popular Stories