ಕರ್ನಾಟಕ ಆಕ್ಸೆಸಿಬಿಲಿಟಿ ಟಾಸ್ಕ್ ಫೋರ್ಸ್ ನೂತನ ಪದಾಧಿಕಾರಿಗಳ ನೇಮಕ: ರಾಜ್ಯಾಧ್ಯಕ್ಷರಾಗಿ ಮುನಿರಾಜು ಆಯ್ಕೆ

ಬೆಂಗಳೂರು: ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ವತಿಯಿಂದ ಜುಲೈ 13 ರಿಂದ 15ರವರೆಗೆ ಆಯೋಜಿಸಲಾಗಿದ್ದ ಮೂರು ದಿನಗಳ ರಾಜ್ಯಮಟ್ಟದ ಆಕ್ಸೆಸಿಬಿಲಿಟಿ(ಸುಲಭ ಲಭ್ಯತೆ) ಕಾರ್ಯಾಗಾರವು ಬೆಂಗಳೂರಿನ ಪಾಲನಾ ಭವನದಲ್ಲಿ ಯಶಸ್ವಿಯಾಗಿ ನೆರವೇರಿತು. ಈ ವೇಳೆ ಕರ್ನಾಟಕ ಆಕ್ಸೆಸಿಬಿಲಿಟಿ ಟಾಸ್ಕ್ ಫೋರ್ಸ್‌ನ ನೂತನ ರಾಜ್ಯಾಧ್ಯಕ್ಷರಾಗಿ ಚಿಕ್ಕಬಳ್ಳಾಪುರದ ಮುನಿರಾಜು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಾಯಚೂರಿನ ಸುರೇಶ್ ಭಂಡಾರಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಯಶೋಧಾ ಇಳಕಲ್, ಖಜಾಂಜಿಯಾಗಿ ಬಳ್ಳಾರಿಯ ಉಮಾಪತಿ ಗೌಡ ಮತ್ತು ಗೌರವಾಧ್ಯಕ್ಷರಾಗಿ ಬಿಜಾಪುರದ ಸಬೀಹಾ ಬೇಗಂ ಆಯ್ಕೆಯಾದರು‌.

ಆಕ್ಸೆಸಿಬಿಲಿಟಿ ಟಾಸ್ಕ್ ಫೋರ್ಸ್‌ನ ಜಿಲ್ಲಾವಾರು ಅಧ್ಯಕ್ಷರ ನೇಮಕ

ಕೆ.ಪಿ ರವಿ – ಚಿಕ್ಕಬಳ್ಳಾಪುರ ಜಿಲ್ಲೆ, ಎಲ್ಲಮ್ಮ ಮಡಿವಾಳ- ವಿಜಯಪುರ ಜಿಲ್ಲೆ, ಹುಸೇನ್ ಸಾಬ್ ಮುದಗಲ್- ಬಾಗಲಕೋಟೆ ಜಿಲ್ಲೆ, ಗಾಯತ್ರಿ- ಕಲಬುರಗಿ ಜಿಲ್ಲೆ, ತಬಸ್ಸುಮ್- ದಾವಣಗೆರೆ ಜಿಲ್ಲೆ, ಎಂ.ಡಿ. ಜಾಫರ್- ರಾಯಚೂರು ಜಿಲ್ಲೆ, ಬೀಮಪ್ಪ- ವಿಜಯನಗರ ಜಿಲ್ಲೆ, ಸುನೀಲ್- ಯಾದಗಿರಿ ಜಿಲ್ಲೆ, ಕ್ರಿಸ್ಟಲ್ ಪ್ರಭಾ- ಬೆಂಗಳೂರು ಹಾಗೂ ರಮೇಶ್‌ರವರು ಕೋಲಾರ ಜಿಲ್ಲಾ ಆಕ್ಸೆಸಿಬಿಲಿಟಿ ಟಾಸ್ಕ್ ಫೋರ್ಸ್‌ನ ಜಿಲ್ಲಾವಾರು ಅಧ್ಯಕ್ಷರಾಗಿ ನೇಮಕವಾದರು‌.

ರಾಜ್ಯಮಟ್ಟದ ಆಕ್ಸೆಸಿಬಿಲಿಟಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಸಿ.ಎಸ್ ದ್ವಾರಕಾನಾಥ್‌ರವರು ವಿಕಲಚೇತನರಿಗಿಂತ ಹೆಚ್ಚಾಗಿ ಸಭ್ಯ ಸಮಾಜಕ್ಕೆ ಆಕ್ಸೆಸಿಬಿಲಿಟಿ ಕುರಿತು ತಿಳಿ ಹೇಳಬೇಕಾದ ಅಗತ್ಯತೆ ಇದೆ ಎಂದರು. ಇದೇ ವೇಳೆ ರಾಜ್ಯ ವಿಕಲಚೇತನರ ಆಯೋಗದ ಆಯುಕ್ತರಾದ ಶ್ರೀಮತಿ ಲತಾ ಕುಮಾರಿ ಎಸ್‌‌. ರವರು ವಿಕಲಚೇತನರ ಕುರಿತು ಸಮಾಜದಲ್ಲಿರುವ ತಿರಸ್ಕಾರ ಭಾವದ ಕುರಿತು ಬೇಸರ ವ್ಯಕ್ತಪಡಿಸಿದರು‌ ಹಾಗೂ ವಿಕಲಚೇತನರು ಆರ್ಥಿಕವಾಗಿ ಸಶಕ್ತರಾಗಿ ನಿಲ್ಲಬೇಕೆಂದು ಕರೆ ನೀಡಿದರು‌. ಅಧ್ಯಕ್ಷೀಯ ಮಾತುಗಳನ್ನಾಡಿದ ಎಪಿಡಿಯ ಗೌರವಾನ್ವಿತ ಕಾರ್ಯದರ್ಶಿ ಜೇಕಬ್ ಕುರಿಯನ್‌ರವರು ದೇಶದಲ್ಲಿ ವಿಕಲಚೇತನರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ವಿದೇಶದಲ್ಲಿ ಆಕ್ಸೆಸಿಬಿಲಿಟಿ ಯಾವ ರೀತಿಯಲ್ಲಿ ಪ್ರಬಲವಾಗಿದೆ ಎಂಬುದರ ಕುರಿತು ತಿಳಿಸಿದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ “ಆಕ್ಸೆಸಿಬಿಲಿಟಿಯ ಕುರಿತ ಸಂಪೂರ್ಣ ಮಾಹಿತಿ”ಯನ್ನು ರಶ್ಮಿ. ಎಂ.ಟಿಯವರು ನೀಡಿದರು. “ಡಿಜಿಟಲ್ ಆಕ್ಸೆಸಿಬಿಲಿಟಿಯ ಮಹತ್ವ”ದ ಕುರಿತು ಶ್ರೀನಿವಾಸುಲು, “ಸುಗಮ್ಯ ಭಾರತ್ ಅಭಿಯಾನ” ಕುರಿತು ಎಪಿಡಿ ನಿರ್ದೇಶಕರಾದ ಶಿವ.ಸಿ‌. ಹಿರೇಮಠ್‌, “ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಸೌಲಭ್ಯಗಳು ಹಾಗೂ ಸೇವೆಗಳ” ಕುರಿತು ಎಪಿಡಿ ಕೋಆರ್ಡಿನೇಟರ್ ಶಿವಪ್ಪ.ಬಿ.ಎನ್, “ಆರ್‌ಪಿಡಿ ಕಾಯ್ದೆ 2016”, “ಕರ್ನಾಟಕ ಆಕ್ಸೆಸಿಬಿಲಿಟಿ ಟಾಸ್ಕ್ ಫೋರ್ಸ್‌ನ ರೂಪುರೇಷಗಳು ಹಾಗೂ ಧೇಯೋದ್ಧೇಶಗಳ” ಕುರಿತು ಎಪಿಡಿ ಉಪನಿರ್ದೇಶಕರಾದ ಎಸ್‌. ಬಾಬುರವರು ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ನಡೆಸಲಾದ ಗುಂಪು ಚಟುವಟಿಕೆಗಳು ಹಾಗೂ ಪ್ರಶ್ನೋತ್ತರ ವೇಳೆಗಳಲ್ಲಿ ಶಿಬಿರಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡರು.

ಇದೇವೇಳೆ, ಕರ್ನಾಟಕ ಆಕ್ಸೆಸಿಬಿಲಿಟಿ ಟಾಸ್ಕ್ ಫೋರ್ಸ್‌ನ ನೂತನ ಪದಾಧಿಕಾರಿಗಳು, ಹಾಗೂ ಸಕ್ರಿಯ ಕಾರ್ಯಕರ್ತರನ್ನು ಕಾರ್ಯಾಗಾರದಲ್ಲಿ ಸನ್ಮಾನಿಸಲಾಯಿತು.

Latest Indian news

Popular Stories