ಗದಗ: ಜಿಲ್ಲೆಯಲ್ಲೂ ಕಾವೇರಿ ಕಿಚ್ಚು ಜೋರಾಗಿದೆ. ರಾಜ್ಯದ 28 ಸಂಸದರಿಗೆ ಶೃದ್ಧಾಂಜಲಿ ಅರ್ಪಿಸಿ ಜಯ ಕರ್ನಾಟಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೀವಂತ ಇದ್ದರೂ ರಾಜ್ಯದ ಪಾಲಿಗೆ ಸತ್ತು ಹೋಗಿದ್ದಾರೆ ಅಂತ ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಾಜಿನಗರ ಲಿಂಕ್ ರೋಡ್ ಸರ್ಕಲ್ನಲ್ಲಿ ರಸ್ತೆ ತಡೆದು ಪೊರಕೆ ಚಳುವಳಿ
ಬೆಂಗಳೂರು: ರಾಜಾಜಿನಗರ ಲಿಂಕ್ ರೋಡ್ ಸರ್ಕಲ್ನಲ್ಲಿ ಹೋರಾಟಗಾರರು ರಸ್ತೆ ತಡೆದು ಪೊರಕೆ ಚಳುವಳಿ ನಡೆಸಿದರು. ತಮಿಳುನಾಡು ಸಿಎಂ ಸ್ಟಾಲಿನ್ ಅವರಿಗೆ ಚಪ್ಪಲಿ ಸೇವೆ ಮಾಡಿದರು.
ಕರ್ನಾಟಕ ಬಂದ್, 44 ವಿಮಾನಗಳು ರದ್ದು
ಕರ್ನಾಟಕ ಬಂದ್ಗೆ ಕರೆಕೊಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸುವ ಮತ್ತು ತೆರಳಬೇಕಿದ್ದ 44 ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ವಿವಿಧ ರಾಜ್ಯಗಳಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ಮತ್ತು ದೆಹಲಿ, ಮುಂಬೈ, ಕೋಲ್ಕತ್ತಾ ಸೇರಿ ಹಲವೆಡೆ ತೆರಳಬೇಕಿದ್ದ ವಿಮಾನಗಳನ್ನು ರದ್ದು ಮಾಡಲಾಗಿದೆ.
ವಿಮಾನದ ಟಿಕೆಟ್ ಪಡೆದು ಏರ್ಪೋರ್ಟ್ ಒಳಗೆ ಹೋಗಿ ಪ್ರತಿಭಟನೆ ಮಾಡುತ್ತಿದ್ದವರ ಬಂಧನ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಒಳಗೆ ಪ್ರತಿಭಟನೆ ನಡೆಸಲು ಬಂದಿದ್ದ, ಕರ್ನಾಟಕ ಸೇನೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಐದು ಜನ ಕಾರ್ಯಕರ್ತರು 09:50 ರ ಇಂಡಿಗೋ 7731 ವಿಮಾನದ ಟಿಕೆಟ್ ಬುಕ್ ಮಾಡಿಕೊಂಡು ವಿಮಾನ ನಿಲ್ದಾಣದ ಒಳಗಡೆ ಪ್ರವೇಶಿಸಿದ್ದರು. ನಂತರ ವಿಮಾನದ ಬಳಿ ಹೋಗಿ ಪ್ರತಿಭಟನೆ ನಡೆಸಲು ಸಜ್ಜಾಗುತ್ತಿದ್ದ ವೇಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.