ಕೋವಿಡ್ ನಿಯಂತ್ರಣಕ್ಕೆ ರಾಜಧಾನಿಯಲ್ಲಿ ಲಾಕ್‌ಡೌನ್, ತಜ್ಞರ ಸಲಹೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್-19 ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪ್ರಾಥಮಿಕ ಹಂತದಲ್ಲಿ 10 ದಿನಗಳ ಕಾಲ ಲಾಕ್ಡೌನ್ ಜಾರಿ ಮಾಡುವುದು ಸೂಕ್ತ ಎಂದು ತಜ್ಞರ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ಮಾಡಿದೆ. ವಿಧಾನಸೌಧದಲ್ಲಿ ಭಾನುವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಸುಧಾಕರ್ ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯ ತುರ್ತು ಸಭೆ ನಡೆಯಿತು. ಸಭೆಯಲ್ಲಿ ಸಮಿತಿ ಸದಸ್ಯರು ಬೆಂಗಳೂರಿನಲ್ಲಿ 10 ದಿನ ಲಾಕ್‌ಡೌನ್ ಜಾರಿ ಮಾಡುವುದು ಸೂಕ್ತ. ಇದರ ಫಲಿತಾಂಶವನ್ನು ನೋಡಿಕೊಂಡು ಸೋಂಕು ಹೆಚ್ಚಿರುವ ಬೇರೆ ಬೇರೆ ಜಿಲ್ಲೆಗಳಿಗೂ ಮುಂದಿನ ಹಂತದಲ್ಲಿ ವಿಸ್ತರಣೆ ಮಾಡಬಹುದು ಎಂದು ಸಲಹೆ ನೀಡಿದರು.
ಕಳೆದ 20 ದಿನಗಳಿಂದ ರಾಜ್ಯದಲ್ಲಿ ಪತ್ತೆಯಾಗುತ್ತಿರುವ ಒಟ್ಟು ಸೋಂಕಿನ ಪ್ರಕರಣಗಳಲ್ಲಿ ಶೇ.80ರಿಂದ 85ರಷ್ಟು ಪ್ರಕರಣಗಳು ಬೆಂಗಳೂರು ನಗರವೊಂದರಲ್ಲೇ ಪತ್ತೆಯಾಗುತ್ತಿದೆ. ಹೀಗಾಗಿ ಸರ್ಕಾರ ಲಾಕ್‌ಡೌನ್ ಮಾಡುವುದು ಸೂಕ್ತ ಎಂದು ತಜ್ಞರ ಸಲಹಾ ಸಮಿತಿ ಸದಸ್ಯರಲ್ಲೊಬ್ಬರಾದ ಡಾ.ಗಿರಿಧರ್ ಬಾಬು ಹೇಳಿದರು.
ಆದರೆ, ಇದನ್ನು ಒಪ್ಪದ ಸುಧಾಕರ್ ಲಾಕ್‌ಡೌನ್ ಬಿಟ್ಟು ಬೇರೆ ಯಾವುದಾದರೂ ಮಾರ್ಗೋಪಾಯಗಳಿದ್ದರೆ ತಿಳಿಸಿ, ಸರಕಾರ ಪಾಲಿಸುತ್ತದೆ ಎಂದರು. ಲಾಕ್‌ಡೌನ್ ಜಾರಿ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಸುತಾರಾಂ ಒಪ್ಪುತ್ತಿಲ್ಲ. ಎಲ್ಲ ಆರ್ಥಿಕ ಚಟುವಟಿಕೆಗಳು ಬಂದ್ ಆದರೆ ಸರ್ಕಾರದ ಬೊಕ್ಕಸಕ್ಕೆ ಯಾವುದೇ ರೀತಿಯ ಆದಾಯ ಬರುವುದಿಲ್ಲ. ಹೀಗಾದರೆ ಸರ್ಕಾರ ನಡೆಸುವುದಾದರೂ ಹೇಗೆ ಎಂಬ ಪ್ರಶ್ನೆಯನ್ನು ಮುಖ್ಯಮಂತ್ರಿಯವರು ಮುಂದಿಟ್ಟಿದ್ದಾರೆ ಎಂದು ಸಚಿವ ಸುಧಾಕರ್ ಹೇಳಿದರು.
ಈಗಾಗಲೇ 8 ಜಿಲ್ಲೆಗಳಲ್ಲಿ ಕೊರೊನಾ ಕರ್ಪ್ಯೂ ವಿಧಿಸಲಾಗಿದೆ. ಇದರಿಂದ ವ್ಯಕ್ತವಾಗುವ ಫಲಿತಾಂಶವನ್ನು ನೋಡಿಕೊಂಡು ಮುಂದೆ ತೀರ್ಮಾನಿಸೋಣ. ಅಗತ್ಯಬಿದ್ದರೆ ಇನ್ನು ಕೆಲವು ಕಡೆ ಕಫ್ರ‍್ಯೂ ಜಾರಿ ಮಾಡಲಾಗುವುದು. ಮೈಕ್ರೋ ಕಂಟೈನ್ಮೆAಟ್ ಮತ್ತು ಕಂಟೋನ್ಮೆAಟ್ ವಲಯಗಳನ್ನು ಹೆಚ್ಚಳ ಮಾಡಲಾಗುವುದು ಎಂದರು.
ಧಾರ್ಮಿಕ, ಸಭೆ ಸಮಾರಂಭಗಳು, ಮದುವೆ ಮಂಟಪಗಳಿಗೂ ನಿರ್ಬಂಧ ಹಾಕಲಾಗುವುದು.
ಲಾಕ್‌ಡೌನ್ ಜಾರಿಯಾದರೆ ಜನರಿಗೆ ನೇರವಾಗಿ ಹೊಡೆತ ಬೀಳಲಿದೆ. ಹೀಗಾಗಿ ಸಿಎಂ ಒಪ್ಪುತ್ತಿಲ್ಲ. ಪ್ರಧಾನಿಯವರು ಕೂಡ ಲಾಕ್‌ಡೌನ್ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಬೇರೆ ಸಲಹೆಗಳನ್ನು ನೀಡಬೇಕು ಎಂದು ಸುಧಾರಕ್ ಸಮಿತಿ ಸದಸ್ಯರಲ್ಲಿ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

Latest Indian news

Popular Stories