ಎಂಎಲ್‌ಸಿ ರವಿಕುಮಾರ್ ಬಹಿರಂಗ ಕ್ಷಮೆ ಕೇಳಲಿ: ಸಚಿವ ಎಚ್.ಕೆ.ಪಾಟೀಲ

ರಾಣಿಬೆನ್ನೂರು (ಜು.05): ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಎಂಎಲ್‌ಸಿ ರವಿಕುಮಾರ್ ಆಡಿರುವ ಅವಹೇಳನಕಾರಿ ಮಾತು ಅತ್ಯಂತ ದುರ್ದೈವದ ಸಂಗತಿ. ಕೂಡಲೇ ರವಿಕುಮಾರ ಬಹಿರಂಗ ಕ್ಷಮೆ ಕೇಳಬೇಕೆಂದು ಕಾನೂನು, ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ನಾಯಕರು ಹಿರಿಯ ಅಧಿಕಾರಿಯೊಬ್ಬರ ಮೇಲೆ ಲಘುವಾಗಿ ಮಾತನಾಡಿರುವುದು ಖಂಡನೀಯ. ಮಹಿಳೆಯರಿಗೆ ಸಣ್ಣ ಅಗೌರವ ಆದರೂ ಸಹಿಸದ ಸಮಾಜ ನಮ್ಮದು. ರವಿಕುಮಾರ್ ಅವರಿಗೆ ಆತ್ಮಸಾಕ್ಷಿ ಇದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು.
ಇಲ್ಲದಿದ್ದರೆ ಜನರಿಗೆ ಅವಮಾನವೆಸಗಿದಂತಾಗುತ್ತದೆ ಎಂದರು. ಆರ್‌ಎಸ್‌ಎಸ್ ನಿಷೇಧ ಮಾಡಬೇಕು ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಅದನ್ನು ಅವರ ಹತ್ತಿರವೇ ಕೇಳಬೇಕು. ಆರ್‌ಎಸ್‌ಎಸ್ ಸಂಘಟನೆಯು ಬಿಜೆಪಿಯನ್ನು ಉಪಯೋಗಿಸಿಕೊಂಡು ಸಮಾಜ ವಿಭಜನೆ ಮಾಡುತ್ತಿದೆ ಅಂತ ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ.
ಅದಕ್ಕಾಗಿ ಪ್ರಿಯಾಂಕ್ ಖರ್ಗೆ ಆ ಹೇಳಿಕೆ ನೀಡಿರಬಹುದು ಎಂದರು. ಸಿಎಂ ಬದಲಾವಣೆ ವಿಚಾರವಾಗಿ ನನ್ನ ಪ್ರಾರ್ಥನೆ ಫಲಿಸಬಹುದು ಎಂಬ ಡಿಕೆಶಿ ಹೇಳಿಕೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ವಿಷಯ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಯಾರೂ ಮಾತನಾಡಬಾರದು ಎಂದು ಹೇಳಿದ್ದಾರೆ. ಅವರ ಮಾತು ನಮಗೆ ಆದೇಶ ಇದ್ದಂತೆ ಎಂದರು.
ಕಾಂಗ್ರೆಸ್ ಸರ್ಕಾರಕ್ಕೆ ಸರ್ಕಾರಿ ನೌಕರರಿಗೂ ವೇತನ ಕೊಡುವುದಕ್ಕೆ ಆಗುತ್ತಿಲ್ಲ ಎಂಬ ಬಿ.ವೈ. ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಗಾರ ಎಲ್ಲಿ ನಿಂತಿದೆ? ನಿಂತಿದ್ದರೆ ಸುಮ್ಮನಿರುತ್ತಿದ್ದರೆ ಎಂದು ಮರುಪ್ರಶ್ನೆ ಹಾಕಿದರು. ಮಲೆಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆ ಮಾಡಿದೆವು.
ಆ ಪ್ರದೇಶಕ್ಕೆ ₹34 ಕೋಟಿ ಮಂಜೂರು ಮಾಡಿದ್ದೇವೆ. ಇದು ಬಿಜೆಪಿಯವರಿಗೆ ಕಾಣಲ್ಲಿಲ್ಲವೇ? ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಬಡತನದ ಬೇರನ್ನು ಕಿತ್ತು ಹಾಕ್ತಿದ್ದೇವೆ. ಬಡವರನ್ನು ಜಿರೋ ಪರ್ಸೆಂಟ್ ಮಾಡಲು ಸಾಧ್ಯವಾಗಿದೆ. ರಾಜ್ಯದಲ್ಲಿ ಸುಮಾರು ಶೇ. 98.5 ಜನರಿಗೆ ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನ ತಲುಪಿದೆ ಎಂದರು.
ರಾಜ್ಯದಲ್ಲಿ 2026ಕ್ಕೆ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಬಿಜೆಪಿ ನಾಯಕರು ತಿರುಕನ ಕನಸು ಕಾಣುತ್ತಿದಾರೆ ಎಂದರು. ನ್ಯಾಯಾಲಯದಲ್ಲಿರುವ ಪ್ರಕರಣಗಳ ಬಗ್ಗೆ ಸರ್ಕಾರದ ಪರವಾಗಿ ಸಮರ್ಥ ವಾದ ನಡೆಯುತ್ತಿಲ್ಲ ಎಂಬ ವಿಚಾರದ ಬಗ್ಗೆ ಸಿಎಂ ಹಾಗೂ ಅಡಿಷನಲ್ ಅಡ್ವೊಕೇಟ್ ಜನರಲ್ ಜತೆ ಚರ್ಚೆ ಮಾಡುತ್ತೇನೆ.
ಸರ್ಕಾರದ ಬಹಳಷ್ಟು ಕೇಸ್‌ಗಳಲ್ಲಿ ಸೋಲಾಗುತ್ತಿದೆ ಎಂಬ ಅಂಶಗಳು ಕಂಡುಬಂದಿವೆ. ಖಂಡಿತವಾಗಿ ಈ ಬಗ್ಗೆ ಬಿಗಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.