ಕರ್ನಾಟಕದ ಬಗ್ಗೆ ಪ್ರಧಾನಿ ಮೋದಿ ತಾತ್ಸಾರ: ಸಚಿವ ರಾಮಲಿಂಗಾರೆಡ್ಡಿ

ಮುಧೋಳ(ಮೇ.02): ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದ್ದರೂ, ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರೂ ಸ್ಪಂದಿಸಲಿಲ್ಲ. ಬರಗಾಲ ಪರಿಹಾರ ನೆರವಿಗಾಗಿ ಸುಪ್ರೀಂ ಕೋರ್ಟ್‌ದಿಂದ ಹಣ ಬಿಡುಗಡೆ ಮಾಡಿಸಬೇಕಾಗಿ ಬಂದಿರುವದು ದುರ್ದೈವದ ಸಂಗತಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬೇಸರ ವ್ಯಕ್ತಪಡಿಸಿದರು.

ನಗರದ ಬಸವಪ್ರಭು ಕತ್ತಿ ಸಭಾ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆಯಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡಬೇಕಾದ ಸಂಸದರು ಸುಮ್ಮನೆ ಕುಳಿತರೆ ಕ್ಷೇತ್ರದ, ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಅಂತವರನ್ನು ಮನೆಗೆ ಕಳುಹಿಸಿ ಕ್ರಿಯಾಶೀಲ ಯುವತಿ ಸಂಯುಕ್ತಾ ಪಾಟೀಲ ಅವರನ್ನು ಗೆಲ್ಲಿಸಲು ಶ್ರಮಿಸಿ ಎಂದರು.

ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ರೈತರಿಗೆ ಅಗತ್ಯವಿರುವುದು ನೀರು ಹಾಗೂ ವಿದ್ಯುತ್, ದೇಶದಲ್ಲಿನ ನದಿ ಜೋಡಣೆ ಮಾಡುವುದಾಗಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದೇನು? ಮಹಾದಾಯಿ ಯೋಜನೆ ಮಾಡಲು ಏಕೆ ಆಗಲಿಲ್ಲ? ಇವರಿಗೆ ರೈತರ ಮತ ಕೇಳುವ ಯಾವುದೇ ಹಕ್ಕಿಲ್ಲ. ಕೇವಲ ಸುಳ್ಳಿನ ಭ್ರಮೆ ಸೃಷ್ಟಿಸಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಸುಳ್ಳಿನ ಸರದಾರನ ಬಂಡವಾಳ ಈಗ ಬಯಲಾಗಿದೆ, ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚ ಅಧಿಕವಾಗುತ್ತಿದೆ, ಅವರಿಗೆ ಬೆಂಬಲ ಬೆಲೆ ನೀಡುತ್ತಿಲ್ಲ.

ಹತ್ತು ವರ್ಷದಲ್ಲಿ ರೈತರ ಯಾವ ಸಾಲವನ್ನು ಇವರು ಮನ್ನಾ ಮಾಡಲಿಲ್ಲ. ಇದು ರೈತ ವಿರೋಧಿ ಸರ್ಕಾರವಾಗಿದೆ. ಪೆಟ್ರೋಲ್, ಡಿಸೇಲ್, ಬಂಗಾರ ಹಾಗೂ ದಿನಬಳಿಕೆ ವಸ್ತುಗಳ ಬೆಲೆ ಗಗನ್ನಕ್ಕೆರಿರುವುದರಿಂದ ಜನಸಾಮಾನ್ಯರು, ಬಿಜೆಪಿಯಿಂದ ದೂರ ಸರಿದಿದ್ದಾರೆ, ಈ ಸಲ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Latest Indian news

Popular Stories