ಬೆಂಗಳೂರು: ಯಾವುದೇ ಪ್ರಮಾಣಪತ್ರವನ್ನು ಆ ಸಂಬಂಧಿತ ಪ್ರಾಧಿಕಾರದಿಂದ ರದ್ದುಗೊಳಿಸಬೇಕು. ಆದರೇ ಪ್ರಮಾಣಪತ್ರವನ್ನು ರದ್ದುಗೊಳಿಸದ ಹೊರತು ಅದನ್ನು ಪ್ರಶ್ನಿಸುವ ಅಧಿಕಾರ ಯಾವುದೇ ಪ್ರಾಧಿಕಾರಕ್ಕೆ ಇಲ್ಲ ಎಂಬುದಾಗಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಲ್ಲದೇ ಕಾನೂನು ಪದವಿ ಪ್ರಮಾಣ ಪತ್ರ ಪ್ರಶ್ನಿಸುವ ಹಕ್ಕು ವಕೀಲರ ಪರಿಷತ್ತಿಗೆ ಇಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ.
ಬೀದರ್ ನಲ್ಲಿನ ಸಿವಿಲ್ ನ್ಯಾಯಾಲಯದಲ್ಲಿ ಟೈಪಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಶೆಲ್ಹಾನ್ ಎಂಬುವರು, ಕರ್ತವ್ಯದ ವೇಳೆಯಲ್ಲೇ ಕೋರ್ಟ್ ಅನುಮತಿ ಪಡೆದು ಎಲ್‌ಎಲ್ ಬಿ ಮುಗಿಸಿದ್ದರು. ಬೀದರ್ ಸಿವಿಲ್ ನ್ಯಾಯಾಲಯದ ಸಹಾಯ ರಿಜಿಸ್ಟ್ರಾರ್ ಆಗಿ ನಿವೃತ್ತಗೊಂಡ ಬಳಿಕ, 2018ರಲ್ಲಿ ಅವರು ವಕೀಲಿಕೆ ಮಾಡೋದಕ್ಕಾಗಿ ನೋಂದಣಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ವಕೀಲರ ಪರಿಷತ್ ತರಗತಿಗಳಿಗೆ ಹಾಜರಾಗದ ದಾಖಲೆಗಳನ್ನು ತೋರಿಸಿಲ್ಲ ಎನ್ನುವ ಕಾರಣಕ್ಕೆ, ವಕೀಲಿಕೆಯ ಸನ್ನದ್ದು ನೋಂದಣಿಗೆ ನಿರಾಕರಿಸಿತ್ತು. ಈ ವಕೀಲರ ಪರಿಷತ್ ನಿರ್ಧಾರವನ್ನು ಶೆಲ್ಹಾನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ಪ್ರಶ್ನಿಸಿದ್ದರು.
ಈ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಕಿಣಗಿ ಅವರಿದ್ದಂತ ಏಕಸದಸ್ಯ ನ್ಯಾಯಪೀಠವು ವಿಚಾರಣೆ ನಡೆಸಿತು. ಅರ್ಜಿದಾರರಿಗೆ ವಿಶ್ವವಿದ್ಯಾಲಯದಿಂದ ತಾತ್ಕಾಲಿಕ ಕಾನೂನು ಪದವಿ ಹಾಗೂ ಘಟಿಕೋತ್ಸವ ಪ್ರಮಾಣಪತ್ರವನ್ನು ನೀಡಲಾಗಿದೆ. ಹೀಗಿದ್ದೂ ಅವರ ಅರ್ಹತೆಯನ್ನು ಊಹಿಸಿವುದು ಸರಿಯಲ್ಲ ಎಂಬುದಾಗಿ ಅಭಿಪ್ರಾಯ ಪಟ್ಟರು.