ಬೆಂಗಳೂರು: ಸಾರ್ವಜನಿಕ ಸೇವೆಯಲ್ಲಿರುವ ನೌಕರರ ವಿರುದ್ಧದ ಆರೋಪಗಳ ಬಗ್ಗೆ ವಿಚಾರಣೆ ನಡೆಸುವಾಗ ಇಲಾಖೆಗಳು ಪಾರದರ್ಶಕತೆ, ಮಾನವೀಯ ನಡೆ ಹೊಂದಿರಬೇಕೆಂದು ಹೈಕೋರ್ಟ್ ಹೇಳಿದೆ. ನೌಕರರು ಯಾವ ಸರ್ಕಾರಗಳ ಗುಲಾಮರಲ್ಲ, ನಮ್ಮ ವ್ಯವಸ್ಥೆ ಈಸ್ಟ್ ಇಂಡಿಯಾ ಕಂಪನಿಯೂ ಅಲ್ಲ ಎಂದು ನ್ಯಾಯಮೂರ್ತಿ ಕೃಷ್ಣ ಎಸ್.
ದೀಕ್ಷಿತ್ ಹಾಗೂ ಜಿ. ಬಸವರಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಲೋಕಾಯುಕ್ತ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.ಪಿ.ವಿ. ರುದ್ರಪ್ಪ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಅರ್ಜಿದಾರರಿಗೆ ಕಾನೂನು ಪ್ರಕಾರ ಸೇವಾ ನಿವೃತ್ತಿವರೆಗೆ ಸಲ್ಲಬೇಕಾದ ವೇತನ ಪಿಂಚಣಿ ಸೇರಿ ಎಲ್ಲಾ ಸೌಲಭ್ಯಗಳನ್ನು ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಆದೇಶಿಸಿದೆ.
ಆರೋಪ ಹೊರಿಸುವ ಮೊದಲು ಲೋಕಾಯುಕ್ತ ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಅರ್ಜಿದಾರರನ್ನು ದುರುದ್ದೇಶದಿಂದ ಸಿಲುಕಿಸಿರುವುದು ಕಂಡು ಬರುತ್ತಿದೆ. ರುದ್ರಪ್ಪ ಲಂಚ ಪಡೆದಿರುವುದಕ್ಕೆ ಎಲ್ಲೂ ಸಾಕ್ಷಗಳಿಲ್ಲ.
ನಿಯಮಾನಸಾರ ಮ್ಯುಟೇಶನ್ ಶುಲ್ಕ ಪಡೆದಿದ್ದಾರೆ ಹೊರತೂ ಪಿರ್ಯಾದುದಾರರು ಮಾಡಿರುವ ಆಪಾದನೆಯಂತೆ ಲಂಚ ಪಡೆದಿರುವ ಮತ್ತು ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಸಾಬೀತುಪಡಿಸುವಲ್ಲಿಯೂ ದೂರುದಾರರು ವಿಫಲರಾಗಿದ್ದಾರೆ. ಈ ಪ್ರಕರಣದಲ್ಲಿ ಪಿರಿಯಾದುದಾರ ದ್ವೇಷದಿಂದ ದೂರು ನೀಡಿದ್ದಾರೆ ಎಂದು ತಿಳಿದು ಬರುತ್ತದೆ ಎಂದು ಅಭಿಪ್ರಾಯಪಟ್ಟಿದೆ.