
Bidar
ಬೀದರ್: ಪರಸ್ಪರ ಡಿಕ್ಕಿಯಾಗಿ ತಡರಾತ್ರಿ ಹೊತ್ತಿ ಉರಿದ ಎರಡು ಲಾರಿ!
ಬೀದರ್ : ತಡರಾತ್ರಿ ಎರಡು ಲಾರಿಗಳ ಮಧ್ಯೆ ಡಿಕ್ಕಿ ಸಂಭವಿಸಿ ಹೊತ್ತಿ ಉರಿದ ಘಟನೆ ಬಸವಕಲ್ಯಾಣ ತಾಲೂಕಿನ ಹಳ್ಳಿ ಗ್ರಾಮದ ಡಾಬಾ ಬಳಿ ನಡೆದಿದೆ.
ಒಂದು ಲಾರಿ ಸುಟ್ಟು ಸಂಪೂರ್ಣ ಭಸ್ಮವಾದರೆ ಇನ್ನೊಂದು ಲಾರಿ ಭಾಗಶಃ ಸುಟ್ಟು ಕರಕಲಾಗಿದೆ. ಮಹಾರಾಷ್ಟ್ರದ ಪುಣೆಯಿಂದ ಹೈದ್ರಾಬಾದ್ಗೆ ಲಾರಿಗಳು ತೆರಳುತ್ತಿದ್ದವು. ಮುಂದೆ ಸಾಗುತ್ತಿದ್ದ ಕಂಟೇನರ್ಗೆ ಹಿಂಬದಿಯಿಂದ ಸಿಮೆಂಟ್ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ಉಂಟಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಸವಕಲ್ಯಾಣ ಅಗ್ನಿಶಾಮಕ ತಂಡ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಸಂಚಾರಿ ಪಿಎಸ್ ಐ ಪುಷ್ಪಾ ಭೇಟಿ ಪರಿಶೀಲನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 65 ರಲ್ಲಿ ದುರ್ಘಟನೆ ನಡೆದಿದ್ದು, ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




