ಬೀದರ್ | ದರೋಡೆ ಪ್ರಕರಣ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸೇರಿದಂತೆ ಮೂವರ ಬಂಧನ

ಬೀದರ್: ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣವನ್ನು ಪೊಲೀಸರು 24 ಗಂಟೆಯೊಳಗೆ ಭೇದಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ಸೇರಿ ಮೂವರನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ₹2.62 ಕೋಟಿ ನಗದು ಜಪ್ತಿ ಮಾಡಿದ್ದಾರೆ. ಆರೋಪಿಗಳಾದ ಗುಂಡುರೆಡ್ಡಿ, ವಿಜಯಕುಮಾರ ರೆಡ್ಡಿ ಮತ್ತು ಸಂಜಯ ರೆಡ್ಡಿ ಬಂಧಿತರು. ಪರಾರಿಯಾಗಿರುವ ಒಬ್ಬನ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ತಿಳಿಸಿದ್ದಾರೆ.

ಜಿ.ಪಂ. ಮಾಜಿ ಸದಸ್ಯನಾಗಿದ್ದ ಗುಂಡುರೆಡ್ಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಸವಕಲ್ಯಾಣದಿಂದ ಬಿಜೆಪಿ ಟಿಕೆಟ್ಗೆ ಯತ್ನಿಸಿದ್ದ. ಟಿಕೆಟ್ ಕೈತಪ್ಪಿದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದ್ದ.

ಘಟನೆ ವಿವರ : ಆಂಧ್ರ ಪ್ರದೇಶದ ತಿರುಪತಿಯ ಉಮಾಶಂಕರ ಭಾರದ್ವಾಜ್ ಎಂಬುವರು ಮಂಗಳವಾರ ರಾತ್ರಿ 8.50ರ ಸುಮಾರಿಗೆ ಇಬ್ಬರು ಸ್ನೇಹಿತರೊಂದಿಗೆ ₹3.50 ಕೋಟಿ ನಗದು ಇಟ್ಟುಕೊಂಡು ಹೈದರಾಬಾದ್ನಿಂದ ಪಂಢರಾಪುರದ ಕಡೆಗೆ ತೆರಳುತ್ತಿದ್ದರು. ಹಾಲು ಖರೀದಿಸಿದ ರೈತನಿಗೆ ಹಣ ಪಾವತಿಸಲು ಹೋಗುತ್ತಿದ್ದರು. ಈ ವೇಳೆ ನಾಲ್ವರು ದ್ವಿಚಕ್ರ ವಾಹನಗಳಲ್ಲಿ ಬಂದು, ಕಾರು ಅಡ್ಡಗಟ್ಟಿ ಗುಂಡುರೆಡ್ಡಿ, ವಿಜಯರೆಡ್ಡಿ ಎಂದು ಹೇಳಿಕೊಂಡು, ಪಿಸ್ತೂಲ್ ತೆಗೆದು ಗಾಳಿಯಲ್ಲಿ ಎರಡು ಗುಂಡುಗಳನ್ನು ಹಾರಿಸಿದ್ದಾರೆ. ಉಮಾಶಂಕರ ಅವರ ಹಣೆಯ ಮೇಲೆ ಪಿಸ್ತೂಲ್ ಇಟ್ಟು ಅವರ ಬಳಿಯಿದ್ದ ₹3.50 ಕೋಟಿ ನಗದನ್ನು ಸಿನಿಮೀಯ ರೀತಿಯಲ್ಲಿ ದೋಚಿಕೊಂಡು ಹೋಗಿದ್ದರು.

ಉಮಾಶಂಕರ ಅವರು ಬುಧವಾರ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಗೆದೂರು ಕೊಟ್ಟಿದ್ದರು. ಸುಲಿಗೆ, ಕೊಲೆ ಯತ್ನ, ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ಬಳಿಕ ಹುಮನಾಬಾದ್ ಡಿವೈಎಸ್ಪಿ ಜೆ.ಎಸ್. ನ್ಯಾಮೆಗೌಡರ್, ಮಂಠಾಳ ಸಿಪಿಐ ಕೃಷ್ಣಕುಮಾರ್ ಪಾಟೀಲ, ಬಸವಕಲ್ಯಾಣ ಪಿಎಸ್ಐ ವಾಸೀಂ ಪಟೇಲ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

Latest Indian news

Popular Stories