ಬೀದರ್‌: ಆಸಾರಾಮ ಬಾಪು ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

ಆಸಾರಾಮ ಬಾಪು ಬಿಡುಗಡೆಗೆ ಆಗ್ರಹಿಸಿ ಯೋಗ ವೇದಾಂತ ಸೇವಾ ಸಮಿತಿ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಗಣೇಶ ಮೈದಾನದಿಂದ ಆರಂಭಗೊಂಡ ರ್‍ಯಾಲಿಯು ಮೋಹನ್‌ ಮಾರುಕಟ್ಟೆ, ಹರಳಯ್ಯಾ ವೃತ್ತದ ಮೂಲಕ ಹಾದು ಜಿಲ್ಲಾಧಿಕಾರಿ ಕಚೇರಿ ತಲುಪಿತು.

ರ್‍ಯಾಲಿಯುದ್ದಕ್ಕೂ ಬಾಪು ಪರ ಘೋಷಣೆಗಳನ್ನು ಕೂಗಿದರು. ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ರಾಷ್ಟ್ರಪತಿ, ಪ್ರಧಾನಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಪೂರ್ವನಿಯೋಜಿತ ಸಂಚು ರೂಪಿಸಿ ಸುಳ್ಳು ಪ್ರಕರಣ ದಾಖಲಿಸಿ ಬಾಪು ಅವರನ್ನು ಬಂಧಿಸಿ ಕಾರಾಗೃಹದಲ್ಲಿ ಇಟ್ಟಿರುವುದು ಖಂಡನಾರ್ಹ. ದೇಶದಲ್ಲಿ ಪ್ರಪ್ರಥಮ ಬಾರಿಗೆ ಸನಾತನ ಹಿಂದೂ ಧರ್ಮವನ್ನು ಜಾಗೃತಗೊಳಿಸುವ ಕೆಲಸ ಅವರು ಮಾಡಿದ್ದಾರೆ. ಮತಾಂತರ ತಡೆದು ಹಿಂದೂ ಧರ್ಮಕ್ಕೆ ವಾಪಸ್‌ ಕರೆತರುವ ಕೆಲಸ ಮಾಡಿದ್ದಾರೆ. ಅನೇಕರಿಗೆ ದೀಕ್ಷೆ ನೀಡಿದ್ದಾರೆ ಎಂದರು.

ಸರ್ಕಾರ ಭಯೋತ್ಪಾದಕರನ್ನು, ದೇಶದ್ರೊಹಿಗಳನ್ನು, ಸಮಾಜಘಾತುಕರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತದೆ. ನಿರಪರಾಧಿ ಬಾಪು ಅವರನ್ನು ಬಿಡುಗಡೆಗೊಳಿಸದೆ ಅನ್ಯಾಯ ಮಾಡುತ್ತಿದೆ. ಭಕ್ತರ ನೋವು ಅರಿತು ಸ್ಪಂದಿಸಬೇಕು. ಬಾಪು ಅನಾರೋಗ್ಯದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಹಾಗಾಗಿ ಅವರನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು.

ಪ್ರಮುಖರಾದ ಸಂಜೀವ ಪಾಟೀಲ ನೇಮತಬಾದ, ಮಹಾದಯ್ಯ ಸ್ವಾಮಿ, ರೇವಣಸಿದ್ದ ಮಳಖೇಡ್, ‌ಸುರೇಂದ್ರ ರೋಡೆ, ರಾಮಕೃಷ್ಣ ಸಾಳೆ, ಪಂಕಜಾ ಗಾಂಧಿ, ಕೀರ್ತಿವರ್ಧನ್, ಆನಂದ ಬಾವಗಿ, ಶಿವಕುಮಾರ ಪಾಂಚಾಳ, ಅಶೋಕ ದಾರಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Latest Indian news

Popular Stories