
ಬಿಜೆಪಿ ಗಾಳಕ್ಕೆ ಸಿಲುಕಿದ ಮುಳೆ, ನಾಮಪತ್ರ ವಾಪಸ್
ಬೀದರ್: ಬಸವಕಲ್ಯಾಣದಲ್ಲಿ ನಡೆದಿರುವ ಅಚ್ಚರಿಯ ಬೆಳವಣಿಗೆಯಲ್ಲಿ ಎನ್ಸಿಪಿಯಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಎಂ.ಜಿ. ಮುಳೆ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದ ಶನಿವಾರ ಮುಳೆ ಅವರು ನಾಮಪತ್ರ ವಾಪಸ್ ಪಡೆದರು. ಮೂಲಗಳ ಪ್ರಕಾರ ಬಿಜೆಪಿ ಮುಖಂಡರ ಮನವೊಲಿಕೆಯೇ ಇದಕ್ಕೆ ಕಾರಣವಾಗಿದೆ. ಮರಾಠಾ ಸಮಾಜದ ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದಾಗಿ ಬಿಜೆಪಿ ನಾಯಕರು ಭರವಸೆ ನೀಡಿದ್ದರಿಂದಲೇ ಮುಳೆ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಬೇರೆ ಬೇರೆ ಮಾತುಗಳೂ ಕೇಳು ಬರುತ್ತಿವೆ.
ಬಸವಕಲ್ಯಾಣ ಉಪಚುನಾವಣೆ ನಿಮಿತ್ತ ಶುಕ್ರವಾರವಷ್ಟೇ ಬಸವಕಲ್ಯಾಣದಲ್ಲಿ ನಡೆದ ಮರಾಠಾ ಸಮಾಜದ ಮುಖಂಡರ ಸಭೆಯಲ್ಲಿ ಬಿಜೆಪಿ ಸಂಸದ ಭಗವಂತ ಖೂಬಾ ಅವರನ್ನು ಅವಮಾನಿಸಿ, ವಾಪಸ್ ಕಳಿಸಿದ ಘಟನೆ ನಡೆದಿತ್ತು. ಎಂ.ಜಿ. ಮುಳೆ ಅವರೂ ಈ ಸಭೆಯಲ್ಲಿದ್ದರು. ಆದರೆ, ಒಂದೇ ರಾತ್ರಿ ಕಳೆಯುವಷ್ಟರಲ್ಲಿ ಎಲ್ಲವೂ ಬದಲಾಗಿದೆ.
ಮುಳೆ ಅವರ ಈ ಕ್ರಮಕ್ಕೆ ಎನ್ಸಿಪಿ ನಾಯಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮುಳೆ ಅವರು ಎನ್ಸಿಪಿಗೆ ದ್ರೋಹ ಬಗೆದಿದ್ದಾರೆ ಎಂದು ಪಕ್ಷದ ಜಿಲ್ಲಾ ಅಧ್ಯಕ್ಷ ರಾಮಭಾವು ಆರೋಪಿಸಿದ್ದಾರೆ.
ಮುಳೆ ಎನ್ಸಿಪಿ ಸೇರಿದ್ದೇ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ. ಪಕ್ಷವು ಅವರನ್ನು ಬರ ಮಾಡಿಕೊಂಡು ಚುನಾವಣಾ ಕಣಕ್ಕಿಳಿಸಿ, ಗೌರವಿಸಿದೆ. ಆದರೆ, ಮುಳೆ ಅವರು ದ್ರೋಹ ಬಗೆದಿದ್ದಾರೆ. ಅವರು ಬಿಜೆಪಿಯನ್ನು ಬೆಂಬಲಿಸುವ ತೀರ್ಮಾನ ಯಾಕೆ ಕೈಗೊಂಡಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಸಮಾಜದ ಹಿತಕ್ಕಿಂತ ಸ್ವಹಿತವೇ ಮುಳೆ ಅವರಿಗೆ ಮುಖ್ಯವಾಗಿದೆ ಎಂದು ಎನ್ಸಿಪಿ ಮುಖಂಡರೊಬ್ಬರು
ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಮರಾಠಾ ಸಮಾಜ ಹಿಂದಿನಿAದಲೂ ಬಿಜೆಪಿಯನ್ನು ಬೆಂಬಲಿಸುತ್ತ ಬಂದಿದೆ. ಎಂ.ಜಿ. ಮುಳೆ ಸ್ಪರ್ಧೆಯಿಂದ ಈ ಬಾರಿ ಮರಾಠಾ ಮತ ವಿಭಜನೆ ಆಗಬಹುದು ಎಂಬ ಅಶಂಕೆ ಕಾಡಿತ್ತು. ಇದನ್ನು ನಿವಾರಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. ಮುಳೆ ನಾಮಪತ್ರ ವಾಪಸ್ ಪಡೆದಿದ್ದರಿಂದ ಬಿಜೆಪಿಗೆ ಅನುಕೂಲವಾಗಲಿದೆ ಎಂಬ ಚರ್ಚೆ ನಡೆಯುತ್ತಿದೆ.
ಆದರೆ, ಮರಾಠಾ ಸಮಾಜವು ಬಿಜೆಪಿಯಿಂದ ಭ್ರಮನಿರಸನಗೊಂಡಿದೆ. ಬರೀ ಮುಳೆ ಅವರು ಕಣದಿಂದ ಹಿಂದೆ ಸರಿದ ಮಾತ್ರಕ್ಕೆ ಇಡೀ ಸಮಾಜ ಬಿಜೆಪಿಗೆ ಬೆಂಬಲವಾಗಿ ನಿಲ್ಲಬಹುದು ಎಂದು ಭಾವಿಸಬೇಕಾಗಿಲ್ಲ ಎಂದು ಸಮಾಜದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಬಸವಕಲ್ಯಾಣ ಉಪಚುನಾವಣಾ ಕಣ ದಿನಕ್ಕೊಂದು ರೂಪ ಪಡೆಯುತ್ತಿದೆ. ಈ ನಡುವೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರೂ ಕಣದಿಂದ ಹಿಂದೆ ಸರಿಯಬಹುದು ಎಂಬ ಚರ್ಚೆ ನಡೆಯುತಿತ್ತು. ಶನಿವಾರ ಸ್ವತ: ಮಲ್ಲಿಕಾರ್ಜುನ ಖೂಬಾ ಅವರು ಇದನ್ನು ಅಲ್ಲಗಳೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡರಿಗೆ ತಮ್ಮ ಮನೆಯ ಬಾಗಿಲು ಮುಚ್ಚಿದೆ ಎಂದಿದ್ದಾರೆ. ಚುನಾವಣೆಯಲ್ಲಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.




