
ಕೋವಿಡ್ ತಡೆ ಕಾರ್ಯಾಚರಣೆಯಲ್ಲಿ ವೈದ್ಯ ವಿದ್ಯಾರ್ಥಿಗಳು ಭಾಗಿ
ಬೀದರ ಮೇ 06 (ಕ.ವಾ.): ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರ ನಿರ್ದೇಶನದಂತೆ ಬೀದರ ಜಿಲ್ಲೆಯಲ್ಲಿ ಕೋವಿಡ್ ತಡೆ ಕಾರ್ಯಾಚರಣೆಯಲ್ಲಿ ಎಂ.ಬಿ.ಬಿ.ಎಸ್., ಬಿ.ಎ.ಎಂ.ಸ್., ಬಿ.ಯು.ಎಂ.ಎಸ್, ಬಿ.ಎಚ್.ಎಂ.ಎಸ್. ವಿದ್ಯಾರ್ಥಿಗಳ ಸೇವೆಯನ್ನು ಕೂಡ ಬಳಸಿಕೊಳ್ಳಲಾಗುತ್ತಿದೆ.
ಬಸವಕಲ್ಯಾಣ ತಾಲೂಕು ಆರೋಗ್ಯ ಅಧಿಕಾರಿಯಾದ ಡಾ.ವಿಷ್ಣುಕಾಂತ ಅವರು ಬಸವಕಲ್ಯಾಣ ತಾಲೂಕಿನಲ್ಲಿ 20ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಅವರಿಗೆ ತರಬೇತಿ ನೀಡಿ, ಕೋವಿಡ್-19 ತಡೆ ಕಾರ್ಯಾಚರಣೆಯಲ್ಲಿ ಯಾವ ರೀತಿ ಭಾಗಿಯಾಗಬೇಕು ಎಂಬುದರ ಬಗ್ಗೆ ಸಲಹೆ ಮಾಡಿದರು.
ಕೋವಿಡ್-19 ಪಾಜಿಟೀವ್ ಆಗಿ ಹೋಮ್ ಐಸೋಲೇಶನ್ನಲ್ಲಿ ಇರುವವರಿಗೆ ನೀಡಲಾಗುವ ಕಿಟ್ನ್ನು ಸರಿಯಾಗಿ ಬಳಸಲು ತಿಳಿಸಬೇಕು. ಅವರಿಗೆ ಸರಿಯಾಗಿ ಚಿಕಿತ್ಸೆ ಪಡೆಯಲು ಮಾರ್ಗದರ್ಶನ ಮಾಡಬೇಕು. ಅಂಬೇಡ್ಕರ್ ಸರ್ಕಲ್, ಬಸ್ಸ್ಟಾö್ಯಂಡ್ ಹತ್ತಿರ, ಜಾಮಾ ಮಸೀದಿ ಹತ್ತಿರ ತೆರೆದಿರುವ ಕೋವಿಡ್ ಸಹಾಯವಾಣಿ ಕೇಂದ್ರಗಳಿಗೆ ಬರುವವರಿಗೆ, ಕೋವಿಡ್ ಲಕ್ಷಣಗಳಿದ್ದಲ್ಲಿ ರ್ಯಾಟ್, ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಲು ಜನರಿಗೆ ಮನವರಿಕೆ ಮಾಡಬೇಕು ಎಂಬುದು ಸೇರಿದಂತೆ ಹಲವಾರು ಮಾಹಿತಿಯನ್ನು ವೈದ್ಯ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.
ಹೋಮ್ ಐಸೋಲೇಶನ್ದಲ್ಲಿ ಇರುವವರಿಗೆ ಉಪಚಾರದ ವಿಧಾನಗಳು, ಊಟೋಪಚಾರದ ರೀತಿ, ಯಾವಾಗ, ಯಾವ ಮಾತ್ರೆ ಸೇವಿಸಬೇಕು ಎಂಬುದು ಸೇರಿದಂತೆ ಹಲವಾರು ಮಾಹಿತಿಯನ್ನು ತಿಳಿಸಲು ಸಲಹೆ ಮಾಡಲಾಯಿತು.
ಹೆಲ್ಪ್ಡೆಸ್ಕ್ ಉದ್ದೇಶ ಅರಿಯಿರಿ: ಕೋವಿಡ್ ಬಗ್ಗೆ ಬಹಳಷ್ಟು ಜನರಿಗೆ ಭಯವಿದೆ. ಸಣ್ಣಪುಟ್ಟ ನೆಗಡಿ, ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡಲ್ಲಿ ತಮಗೆಲ್ಲಿ ಕೋವಿಡ್ ಇದೆಯೋ ಏನೋ ಎಂದು ಭಯಪಡುವಂತವರು ಯಾವುದೇ ಹಿಂಜರಿಕೆಯಿಲ್ಲದೇ ಹೆಲ್ಪ್ ಡೆಸ್ಕ್ಗೆ ಬಂದು ಮಾಹಿತಿ ಪಡೆದು, ಆರೋಗ್ಯವನ್ನು ಪರೀಕ್ಷಿಸಿಕೊಂಡು ಬೇಗ ಚಿಕಿತ್ಸೆ ಪಡೆದರೆ ಪ್ರಾಣಾಪಾಯದಿಂದ ಪಾರಾಗಬಹುದು. ಹೀಗಾಗಿ ಸಾರ್ವಜನಿಕರು ಹೆಲ್ಪ ಡೆಸ್ಕನ್ನು ತೆರೆದಿರುವ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕು ಎಂದು ಇದೆ ವೇಳೆ ಡಾ.ವಿಷ್ಣುಕಾಂತ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.




