
ಸಂಬಂಧ ಬೆಳೆಸುವ ನೆಪವೊಡ್ಡಿ ಜಮೀನು ಹಣ ನೀಡದೆ ವಂಚಿಸಿದ ಶಾಸಕ ಚವ್ಹಾಣ: ನ್ಯಾಯ ದೊರಕದಿದ್ದರೆ ಸಾಮೂಹಿಕ ಆತ್ಮಹತ್ಯೆ ಎಚ್ಚರಿಕೆ
ಬೀದರ: ಔರಾದ ತಾಲೂಕಿನ ಕಿರುಗುನವಾಡಿ ಗ್ರಾಮದ ನಿವಾಸಿ ಘಟುರ ತಂದೆ ಲಸ್ಕರ್ ಹಾಗೂ ನಮ್ಮ ತಾಯಂದಿರಾದ ಸುಭದ್ರಾಬಾಯಿ ಗಂಡ ಘಟುರ ಹಾಗೂ ಭಾಗಿರಥಿಬಾಯಿ ಗಂಡ ಘಟುರ ಇವರೆಲ್ಲರೂ ಅನಕ್ಷರಸ್ಥರಾಗಿದ್ದು, ನಮ್ಮ ಗಮನಕ್ಕೆ ತರದೆ ಔರಾದನ ಮಾಜಿ ಸಚಿವರು ಹಾಗೂ ಹಾಲಿ ಶಾಸಕ ಪ್ರಭು ಚವ್ಹಾಣ ಅವರು ವಂಚಿಸಿದ್ದಾರೆ ಎಂದು ಗಂಗಾಧರ ರಾಠೋಡ ಗಂಭೀರ ಆರೋಪ ಮಾಡಿದ್ದಾರೆ.
ಭಾನುವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ನಮ್ಮ ತಂದೆ ಹಾಗೂ ತಾಯಂದಿರ ಹೆಬ್ಬೆರಳು ಗುರುತು ಪಡೆದು ಸರ್ವೆ ನಂ 125 ರಲ್ಲಿ 20 ಎಕರೆ ಜಮೀನನ್ನು ಹಾಗೂ ನಮ್ಮ ತಾಯಂದಿರಾದ ಸುಭದ್ರಬಾಯಿ ಹಾಗೂ ಭಾಗಿರಥಿಬಾಯಿ ಅವರ ಹೆಸರಿನಲ್ಲಿರುವ ಸರ್ವೆ ನಂ. 126 ರಲ್ಲಿರುವ ತಲಾ ಮೂರು ಎಕರೆ 8 ಗುಂಟೆ ಜಮೀನನ್ನು ಕಬಳಿಸಿ ಹಣ ಕೊಡುವುದಾಗಿ ನಂಬಿಸಿದ್ದಾರೆ.
ಈಗ ಹಣ ಕೇಳಿದರೆ ನಮ್ಮ ಪುತ್ರಿಯನ್ನು ತಮ್ಮ ಮಗ ಪ್ರತಿಕ ಚವ್ಹಾಣ ಜೊತೆ ಸಂಬಂಧ ಕುದುರಿಸುವುದಾಗಿ ವಂಚಿಸಿ ಇಂದು ಮಹಾರಾಷ್ಟ್ರದ ದೇಗಲೂರು ತಾಲೂಕಿನ ಹಣೆಗಾಂವ ಗ್ರಾಮದ ಸಂಬಂಧ ಬೆಳೆಸಲು ಮುಂದಾಗುವ ಮೂಲಕ ಎಂದರೆ ಡಿ, 25 ರಂದು ಬೇರೆ ಸಂಬಂಧ ಬೆಳೆಸಲು ಮುಂದಾಗುವ ಮೂಲಕ ವಂಚಿಸಿದ್ದಾರೆ. ಹಣ ಕೊಡುವ ಹಾಗೂ ಸಂಬಂಧ ಬೆಸೆಯುವ ನೆಪದಲ್ಲಿ ನಮ್ಮನ್ನು ಬೀದಿಗೆ ತಳ್ಳಿದ್ದಾರೆ ಎಂದು
ಗಂಗಾಧರ ಆಪಾದಿಸಿದರು.
ದಿನಾಂಕ: 09-10-2020 ರಂದು ಸ. ನಂ. 126ರಲ್ಲಿ ಭಾಗಿರಥಿಬಾಯಿ ಗಂಡ ಘಟುರ ಹಾಗೂ ಸುಭದ್ರಾಬಾಯಿ ಗಂಡ ಘಟುರ ಇವರಿಂದ ತಲಾ 3 ಎಕರೆ 8 ಗುಂಟೆ ಅಂದರೆ ಒಟ್ಟು 6 ಎಕರೆ 16 ಗುಂಟೆ ಜಮೀನು ಲಪಟಾಯಿಸಿರುತ್ತಾರೆ. ಮತ್ತು 25-11-2020 ರಂದು ಘಟುರ ತಂದೆ ಲಸ್ಕರ್ ಇವರಿಂದ ಸ.ನಂ 125ರಲ್ಲಿ 20 ಎಕರೆ ಜಮೀನು ಮೋಸದಿಂದ ಕಬಳಿಸಲಾಗಿದೆ. ಈ ಎಲ್ಲಾ (26 ಎಕರೆ 16 ಗುಂಟೆ) ಜಮೀನಿನ ಸರಾಸರಿ ಮೊತ್ತ ಒಂದು ಕೋಟಿ ಐವತ್ತು ಲಕ್ಷ ಆಗಿದ್ದು, ಒಂದು ನಯಾಪೈಸೆ ನೀಡದೆ ಪ್ರಭು ಚವ್ಹಾಣ ನಮಗೆ ಮೋಸ ಎಸಗಿದ್ದಾರೆ.
ಆಗ ಹಣ ಕೇಳಿದರೆ ನಮ್ಮ ಪುತ್ರ ಪ್ರತೀಕ ಚವ್ಹಾಣಗೆ ನಿಮ್ಮ ಮಗಳು ಪೂಜಾ ರಾಠೋಡಳನ್ನು ವಿವಾಹ ಮಾಡುವುದಾಗಿ ನಂಬಿಸಿ, ಮೂರು ವರ್ಷಗಳ ನಂತರ ಜಮೀನಿನ ಹಣವೂ ನೀಡದೆ, ಸಂಬಂಧವೂ ಕುದುರಿಸದೆ ಈಗ ಬೇರೆ ಸಂಬಂಧ ಬೆಳೆಸಲು ಮುಂದಾಗಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಗಂಗಾಧರ ರಾಠೋಡ ದೂರಿದರು.
ಕಳೆದ ಮೂರು ವರ್ಷಗಳಿಂದ ಸಂಬಂಧದ ನೆಪವೊಡ್ಡಿ ಜಮೀನಿನ ಹಣವೂ ಕೊಡದೇ ಸಂಬಂಧವೂ ಕುದುರಿಸದೆ ಮೋಸ ಮಾಡಿರುವುದನ್ನು ಪ್ರಶ್ನಿಸಿ ಬೀದರ ಮಹಿಳಾ ಪೊಲೀಸ್ ಠಾಣೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಈಶಾನ್ಯ ವಲಯ ಐಜಿಪಿ ಕಲಬುರಗಿ ಅವರಿಗೆ, ಮಾನ್ಯ ಪೊಲೀಸ್ ಮಹಾನಿರ್ದೇಶಕರು ಬೆಂಗಳೂರು ಅವರಿಗೆ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಈ ಕುರಿತು ದೂರು ಸಲ್ಲಿಸಲಾಗಿದೆ. ನಮ್ಮೊಂದಿಗೆ ಸಂಬಂಧ ಬೆಳೆಸುವುದಾಗಿ ನಂಬಿಸಿ ಈಗ ಬೇರೆ ಸಂಬಂಧ ವರಿಸಲು ಮುಂದಾಗಿರುವುದನ್ನು ನಿಲ್ಲಿಸಬೇಕು. ಆಕ್ರಮವಾಗಿ ಕಬಳಿಸಿದ ಜಮೀನು ಪುನಃ ನಮಗೆ ನೀಡಿ ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದಲ್ಲಿ ನಮ್ಮ ಇಡೀ ಕುಟುಂಬ ಸಾಮೂಹಿಕ ಆತ್ಮಹತ್ಯೆಗೆ ಮುಂದಾಗುವುದಾಗಿ ಗಂಗಾಧರ ರಾಠೋಡ ಎಚ್ಚರಿಸಿದರು.
ಹಣಮಂತ ದೇಶಮುಖ
THG ಕನ್ನಡ ಬೀದರ್




