ಔರಾದ್ ಪಟ್ಟಣ ಪುರಸಭೆಯಾಗಿ ಮೇಲ್ದರ್ಜೆಗೇರಿಸಿ: ಶಾಸಕ ಪ್ರಭು ಚವ್ಹಾಣ ಮನವಿ

 

ಔರಾದ್ ಪಟ್ಟಣ ಪಂಚಾಯತಿಯನ್ನು ಪುರಸಭೆಯನ್ನಾಗಿ ಮತ್ತು ಕಮಲನಗರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಬೇಕೆಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಪೌರಾಡಳಿತ ಸಚಿವರಾದ ರಹೀಮ್ ಖಾನ್ ಅವರಲ್ಲಿ ಒತ್ತಾಯಿಸಿದ್ದಾರೆ.

ನನ್ನ ಮತ ಕ್ಷೇತ್ರವಾದ ಔರಾದ್ ಡಾ.ನಂಜುಂಡಪ್ಪ ವರದಿಯನ್ವಯ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಪ್ರಸ್ತುತ ಔರಾದ ಪಟ್ಟಣ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದು, ಪಟ್ಟಣದ ವ್ಯಾಪ್ತಿಗೆ ಹಲವಾರು ಗ್ರಾಮಗಳು ಹೊಂದಿಕೊಂಡಿವೆ. ಈ ಗ್ರಾಮಗಳ ಜನಸಂಖ್ಯೆಯನ್ನು ಪರಿಗಣಿಸಿದಲ್ಲಿ ಪಟ್ಟಣ ಪಂಚಾಯಿತಿ ಕೇಂದ್ರ ಸ್ಥಾನವನ್ನು ಪುರಸಭೆಯ ಕೇಂದ್ರ ಸ್ಥಾನವನ್ನಾಗಿ ಮೇಲ್ದರ್ಜೆಗೇರಿಸಬಹುದಾಗಿರುತ್ತದೆ. ಈ ಬಗ್ಗೆ ಕಳೆದ ಸರ್ಕಾರದ ಅವಧಿಯಲ್ಲಿಯೂ ಸಹ ನಾನು ಮನವಿಯನ್ನು ಸಲ್ಲಿಸಿದ್ದು, ಪ್ರಸ್ತುತ ಪ್ರಸ್ತಾವನೆಯ ಕಡತವು ಪೌರಾಡಳಿತ ಇಲಾಖೆಯಲ್ಲಿ ಬಾಕಿ ಇದ್ದು, ಕೂಡಲೇ ಔರಾದ್ ಪಟ್ಟಣ ಪಂಚಾಯತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ‌ ವಹಿಸಬೇಕೆಂದು ಕೋರಿದ್ದಾರೆ.

ಹಾಗೆಯೇ ನನ್ನ ಮತಕ್ಷೇತ್ರದಲ್ಲಿನ ಕಮಲನಗರವನ್ನು ಹೊಸದಾಗಿ ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿದ್ದು, ಈ ಪಂಚಾಯತಿಯ ವ್ಯಾಪ್ತಿಯಲ್ಲಿ 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಈಗಾಗಲೇ ಬೀದರ್ ಜಿಲ್ಲಾಧಿಕಾರಿಗಳಿಂದ ಕಮಲನಗರ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯು ಪೌರಾಡಳಿತ ಇಲಾಖೆಯಿಂದ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಕೆಯಾಗಿರುತ್ತದೆ. ತಾವು ಮುತುವರ್ಜಿ ವಹಿಸಿ ಹೊಸ ತಾಲ್ಲೂಕು ಕೇಂದ್ರವಾದ ಕಮಲನಗರವನ್ನು ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿಸಬೇಕೆಂದು ಮನವಿ ಪತ್ರದಲ್ಲಿ ಶಾಸಕ ಪ್ರಭು ಚವ್ಹಾಣ ಕೋರಿದ್ದಾರೆ.

Latest Indian news

Popular Stories