ಶಾಲಾ ಕಟ್ಟಡಗಳು ಸರಿಯಾಗಿ ನಿರ್ವಹಣೆಯಾಗಲಿ: ಡಾ.ರಿಚರ್ಡ್ ವಿನ್ಸೆಟ್ ಡಿಸೋಜ

ಬೀದರ ಆಗಸ್ಟ್ 04 ( ಕರ್ನಾಟಕ ವಾರ್ತೆ): ಮಳೆ ತೀವ್ರ ಸುರಿಯುತ್ತಿರುವ ಹಿನ್ನೆಲೆಯಲ್ಲಿ, ಮಕ್ಕಳ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿನ ಎಲ್ಲ ಶಾಲಾ ಕಟ್ಟಡಗಳು ಸುಸ್ಥಿತಿಯಲ್ಲಿರುವಂತೆ ನಿರ್ವಹಣೆಗೆ ಒತ್ತು ಕೊಡಬೇಕು ಎಂದು ಬೀದರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಆಗಸ್ಟ್ 4ರಂದು ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಆಗಾಗ ತೀವ್ರ ರೀತಿಯಲ್ಲಿ ಮಳೆ ಸುರಿಯುತ್ತಲೆ ಇದೆ. ಹೀಗಾಗಿ ಶಾಲಾ ತರಗತಿ ಕೊಠಡಿಗಳು ಸುಭದ್ರವಾಗಿ ಇರುವಂತೆ ನೋಡಿಕೊಳ್ಳಬೇಕು.
ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಿದ ಶಿಥಿಲಗೊಂಡ ಶಾಲಾ ತರಗತಿ ಕೋಣೆಗಳ ದುರಸ್ತಿಗೆ ಒತ್ತು ಕೊಡಬೇಕು. ಗುಣಮಟ್ಟದತ್ತ ಒತ್ತು ಕೊಡದೇ ಸಮರ್ಪಕವಾಗಿ ಕಾರ್ಯನಿರ್ವಹಿಸದ ಏಜೆನ್ಸಿಗಳಿಗೆ ನೊಟೀಸ್ ರವಾನಿಸಿ ಎಚ್ಚರಿಕೆ ನೀಡಬೇಕು ಎಂದು ಕಾರ್ಯದರ್ಶಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಬೀದರ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಕಟ್ಟಡಗಳು 91 ಇರುತ್ತವೆ. 54 ಶಾಲಾ ತರಗತಿ ಕೋಣೆಗಳು ಶಿಥಿಲಗೊಂಡಿರುವುದಾಗಿ ಗುರುತಿಸಲಾಗಿದೆ ಎಂದು ಶಿಕ್ಷಣಾಧಿಕಾರಿ ತುಳಸೀರಾಮ ದೊಡ್ಡೆ ಅವರು ಸಭೆಗೆ ಮಾಹಿತಿ ನೀಡಿದರು.
ತಿಂಗಳ ಗಡುವು: 1.24 ಕೋಟಿ ರೂ.ವೆಚ್ಚದಲ್ಲಿ 36 ಕಾಮಗಾರಿಗಳನ್ನು ತಿಂಗಳೊಳಗೆ ಪೂರ್ಣಗೊಳಿಸಲು ಹೆಚ್ಚಿನ ಗಮನ ಕೊಡಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದರು.
ಪಾಲಕರ ಮನವೊಲಿಸಿ: ಮೆಟ್ರಿಕ್ ಪೂರ್ವ ವಸತಿ ನಿಲಯಗಳು ಇದುವರೆಗೆ ಆರಂಭವಾಗಿಲ್ಲ. ಜಿಲ್ಲೆಯಲ್ಲಿ ಒಟ್ಟು 37 ಮೆಟ್ರಿಕ್ ನಂತರದ ವಸತಿ ನಿಲಯಗಳ ಪೈಕಿ ಇದುವರೆಗೆ 27 ವಸತಿ ನಿಲಯಗಳು ಮಾತ್ರ ತೆರೆದಿವೆ. 1004 ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದು ಬಿಸಿಎಂ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಪಾಲಕರ ಮನವೊಲಿಸಿ ಮಕ್ಕಳು ಹಾಸ್ಟೆಲಗೆ ಬರುವಂತೆ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಬಿಸಿಎಂ ಅಧಿಕಾರಿಗೆ ಸೂಚನೆ ನೀಡಿದರು.
ಅಧಿಕಾರಿಗಳಿಗೆ ಸೂಚನೆ: ಸಭೆಯ ಬುಕ್ ಲೇಟನ್ನು ಸಿದ್ದ ಮಾದರಿಯಲ್ಲಿ ಅಚ್ಚುಕಟ್ಟಾಗಿ ತಯಾರಿಸಲು ಅಧಿಕಾರಿಗಳು ಸಹಕರಿಸಬೇಕು. ಸಭೆಗೆ ಬರುವ ಮೊದಲು ಆಯಾ ಇಲಾಖೆಗಳ ಅಧಿಕಾರಿಗಳು, ಇನ್ಮುಂದೆ ಕಡ್ಡಾಯವಾಗಿ ಸಹಿ ಮಾಡಿದ ಕಾಪಿಯನ್ನು ಮುಂಚಿತವಾಗಿ ತಲುಪಿಸಬೇಕು ಎಂದು ಜಿಲ್ಲಾಧಿಕಾರಿಗಳು ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೆಳೆಗಳು ಉತ್ತಮವಾಗಿವೆ: ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ತಾರಾಮಣಿ ಜಿ.ಎಚ್.ಅವರು ಮಾತನಾಡಿ, ಜಿಲ್ಲೆಯಲ್ಲಿ 380 ಮಿ.ಮೀ ವಾಡಿಕೆ ಮಳೆಗೆ ವಾಸ್ತವವಾಗಿ 445 ಮಿ.ಮೀ ಸುರಿದು, ಶೇ.17ರಷ್ಟು ಅಧೀಕ ಮಳೆಯಾಗಿದೆ. ಜಿಲ್ಲೆಯ ಪ್ರಮುಖ ಬೆಳೆಯಾದ ಸೋಯಾಬೀನ್ 2,02,000 ಹೆಕ್ಟೇರ್ ನಲ್ಲಿ, ಎರಡನೇ ಪ್ರಮುಖ ಬೆಳೆಯಾದ ತೊಗರಿಯು 90,000 ಹೇಕ್ಟೆರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈಗ ಮಳೆ ನಿಂತಿದ್ದು, ಬೆಳೆಗಳು ಸರಿಯಾಗಿವೆ. ಇದುವರೆಗೆ 24,000 ಮೆಟ್ರಿಕ್ ಟನ್ ರಸಗೊಬ್ಬರ ವಿತರಣೆಯಾಗಿದೆ. 16,000 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ. 2020-21ನೇ ಸಾಲಿನಲ್ಲಿ ಒಟ್ಟು 56 ರೈತರ ಆತ್ಮಹತ್ಯೆ ಪ್ರಕರಣಗಳ ಪೈಕಿ 37 ರೈತ ಕುಟುಂಬದವರಿಗೆ ಪರಿಹಾರ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
21 ಬಾಲ್ಯ ವಿವಾಹ ತಡೆ: ಜಿಲ್ಲೆಯಲ್ಲಿ 21 ಬಾಲ್ಯ ವಿವಾಹ ತಡೆಯಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಇಂತಹ ಕೃತ್ಯಕ್ಕೆ ಯಾರಾದರು ಕುಮ್ಮಕ್ಕು ನೀಡಿದರೆ ಅದನ್ನು ಗಂಭೀರವಾಗಿ ಪರಿಗಣಿಸಿ ಆ ಬಗ್ಗೆ ತಮಗೆ ತಿಳಿಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ತೋಟಗಾರಿಕೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಅಕ್ಷರ ದಾಸೋಹ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.
ಸಭೆಯಲ್ಲಿ ಜಿಪಂ ಸಿಇಓ ಜಹೀರಾ ನಸೀಂ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ ಬಸವಕಲ್ಯಾಣ ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಡಾ.ಭುವನೇಶ ಪಾಟೀಲ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸೂರ್ಯಕಾಂತ ಎಸ್., ಜಿಪಂ ಮುಖ್ಯ ಯೋಜನಾಧಿಕಾರಿ ಎಸ್ ಎಸ್ ಮಠಪತಿ ಹಾಗೂ ಇತರರು ಇದ್ದರು.

Latest Indian news

Popular Stories