ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆ | ಸಿ ವಿಜಲ್‌ಗೆ 761 ಸಹಿತ 1199 ದೂರುಗಳು: ಶೇ.10ರಷ್ಟು ನೀತಿ ಸಂಹಿತೆ ಪ್ರಕರಣ ದಾಖಲು

“ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಗೆ ಸಂಬಂಧಿಸಿ ಈವರೆಗೆ ಸಿ ವಿಜಲ್‌ಗೆ 761 ಸೇರಿದಂತೆ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 1199 ದೂರುಗಳು ಬಂದಿದ್ದು, ಅದರಲ್ಲಿ ಮೂರು ಹೊರತು ಪಡಿಸಿ ಉಳಿದ ಎಲ್ಲ ದೂರುಗಳನ್ನು ಇತ್ಯರ್ಥ ಪಡಿಸಲಾಗಿದೆ. ಒಟ್ಟು ದೂರಿನ ಶೇ.10ರಷ್ಟು ಮಾತ್ರ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ ಎಂದು ಉಡುಪಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಒಟ್ಟು 1842 ಮತಗಟ್ಟೆಗಳ ಪೈಕಿ 1270 ಮತಗಟ್ಟೆಗಳಲ್ಲಿ ಕ್ಯಾಮೆರಾ ಅಳವಡಿಸಿ ವೆಬ್ ಕಾಸ್ಟಿಂಗ್ ಮಾಡಲಾಗುವುದು. ಹೀಗೆ ಕ್ಷೇತ್ರದ ಶೇ.90ರಷ್ಟು ಮತಗಟ್ಟೆಗಳ ಚಲನವಲನಗಳನ್ನು ರಾಷ್ಟ್ರೀಯ ಹಾಗೂ ರಾಜ್ಯ ಚುನಾವಣಾ ಆಯೋಗ ಕೂಡ ದೆಹಲಿ, ಬೆಂಗಳೂರಿ ನಲ್ಲಿಯೇ ವೀಕ್ಷಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಉಡುಪಿ ಜಿಲ್ಲೆಯಲ್ಲಿ 203 ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ 202 ಕ್ರಿಟಿಕಲ್ ಮತಗಟ್ಟೆಗಳಿವೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಟ್ಟು 52 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಇಲ್ಲಿಗೆ ಸೆಂಟರ್ ಆರ್ಮ್ಡ್ ಪೊಲೀಸ್ ಪೋರ್ಸ್‌ಗಳನ್ನು ನಿಯೋಜಿಸಲಾಗುತ್ತದೆ. 459 ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸಾರ್ವರ್‌ಗಳನ್ನು ಮತ್ತು ಸಿಗ್ನಲ್ ಸಿಗದ 18 ಮತಗಟ್ಟೆಗಳಲ್ಲಿ ಚಿತ್ರೀಕರಣ ಮಾಡಲು ವಿಡಿಯೋಗ್ರಾಫರ್ ನಿಯೋಜಿಸಲಾಗುತ್ತದೆ ಎಂದರು.

ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಿ ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಗಳಿಗೆ ವಿವಿಎಂ ನೊಂದಿಗೆ ತೆರಳಲು ಬಸ್ ಸೇರಿದಂತೆ ಒಟ್ಟು 260 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಅದರ ಜೊತೆ ರಿಸರ್ವ್ ಇವಿಎಂಗಳನ್ನು ಕೊಂಡೊಯ್ಯುವ 162 ಸೆಕ್ಟರ್ ಆಫೀಸರ್‌ಗಳ 162 ವಾಹನ ಗಳಿಗೂ ಜಿಪಿಎಸ್ ಅಳವಡಿಸಲಾಗಿದೆ. ಚುನಾವಣಾ ಕರ್ತವ್ಯಕ್ಕಾಗಿ ಒಟ್ಟು 4120 ಮಂದಿ ಅಧಿಕಾರಿ ಹಾಗೂ ಸಿಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಅಂತಿಮ ಮತದಾರರ ಪಟ್ಟಿಯಲ್ಲಿ 768215 ಪುರುಷ, 816910 ಮಹಿಳೆ ಮತ್ತು 37 ತೃತೀಯ ಲಿಂಗಿ ಸೇರಿದಂತೆ ಒಟ್ಟು 1585162 ಮತದಾರರಿದ್ದಾರೆ. ಗೃಹ ಮತದಾನದಲ್ಲಿ 4517(ಶೇ.96.85) ಹಿರಿಯ ನಾಗರಿಕರು, 1408 (ಶೇ.98.05) ವಿಕಲಚೇತನ ಸೇರಿದಂತೆ ಒಟ್ಟು 5995 ಮತದಾನ ಮಾಡಿ ದ್ದಾರೆ. ಅರ್ಜಿ ಸಲ್ಲಿಸಿದ 395ರ ಪೈಕಿ 159 ಮಂದಿ ಅಂಚೆ ಮತದಾನ ಕೇಂದ್ರದಲ್ಲಿ ಮತದಾನ ಮಾಡಿದ್ದಾರೆ. ಈ ಮತ ಪತ್ರಗಳನ್ನು ಸ್ಟ್ರಾಂಗ್ ರೂಮ್ ನಲ್ಲಿ ಇರಿಸಲಾಗಿದೆ ಎಂದು ಅವರು ತಿಳಿಸಿದರು.

ಎ.26ರ ಮತದಾನ ದಿನ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದ್ದು, ರಜೆ ನೀಡದೆ ಮತದಾನ ಹಕ್ಕು ನಿರಾಕರಿಸುವ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಚುನಾವಣೆಗೆ ಸಂಬಂಧಿಸಿ ಈವರೆಗೆ ಒಟ್ಟು 94.67ಲಕ್ಷ ರೂ. ಮೌಲ್ಯದ 15380.125 ಲೀಟರ್ ಮದ್ಯ, 11ಲಕ್ಷ ರೂ. ಮೌಲ್ಯದ 3449 ಕೆಜಿ ಡ್ರಗ್ಸ್ ವಶಪಡಿಸಿ ಕೊಳ್ಳಲಾಗಿದೆ. 14.92ಲಕ್ಷ ರೂ. ದಾಖಲೆ ಇಲ್ಲದ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಉಡುಪಿ ಜಿಲ್ಲೆಯಲ್ಲಿ ಶೇ.98.44 ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ.95.98 ಮತದಾರರ ಸ್ಲೀಪ್‌ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Latest Indian news

Popular Stories