Udupi | ಭಾರೀ ಮಳೆಗೆ ನಲುಗಿದ ನಗರ ಪ್ರದೇಶ | ಅಂಗಡಿ ಮುಗ್ಗಟ್ಟಿಗೆ ನುಗ್ಗಿದ ನೀರು | ಜನ ಜೀವನ ಅಸ್ತವ್ಯಸ್ತ!

ಉಡುಪಿ: ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು ಹಲವು ಕಡೆ ನೆರೆಯುಂಟಾಗಿದೆ. ಮುಖ್ಯವಾಗಿ ಉಡುಪಿ ನಗರ ಪ್ರದೇಶದ ಹಲವು ಕಡೆ ನೆರೆ ನೀರು ನಿಂತು ಸಮಸ್ಯೆ ಸೃಷ್ಟಿಯಾಗಿದೆ.

ಸೋಮವಾರ ಬೆಳಗ್ಗೆ ಉಡುಪಿ ನಗರದ ಹಲವು ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಠಿಯಾಗಿದ್ದು, ನೂರಾರು ಮನೆಗಳು ಜಲಾವೃತಗೊಂಡಿವೆ. ಹಲವು ಅಂಗಡಿಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ಹಾನಿಯಾಗಿದೆ. ನೆರೆಯಿಂದ ಸಿಲುಕಿರುವ ಹಲವು ಮಂದಿಯನ್ನು ಅಗ್ನಿಶಾಮಕ ದಳ, ನಗರಸಭೆ ಸಿಬ್ಬಂದಿ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ನಗರದ ಕರಂಬಳ್ಳಿ, ಗುಂಡಿಬೈಲು, ಪಾಡಿಗಾರು, ಮಠದಬೆಟ್ಟು, ಕಲ್ಸಂಕ ಬೈಲಕೆರೆ, ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶ, ಮೂಡನಿಡಂಬೂರು, ನಿಟ್ಟೂರು, ಮಲ್ಪೆ, ಮಣಿಪಾಲ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, 200ಕ್ಕೂ ಅಧಿಕ ಮನೆಗಳು ಜಲ ದಿಗ್ಭಂಧನಕ್ಕೆ ಒಳಗಾಗಿವೆ. ಇದರಿಂದ ಇಡೀ ನಗರದಲ್ಲಿ ಸಂಪೂರ್ಣ ಜನಜೀವನ ಅಸ್ತವ್ಯಸ್ತಗೊಂಡಿದೆ.

ಗುಂಡಿಬೈಲು, ಬಡಗುಪೇಟೆಯಲ್ಲಿನ ಹಲವು ಅಂಗಡಿಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಹಾನಿಯಾಗಿವೆ.

ಜಿಲ್ಲೆಯ ಪ್ರಮುಖ ನದಿಗಳಾದ ಸೀತಾ, ಸವರ್ಣ, ಇಂದ್ರಾಣಿ ನದಿ, ಉದ್ಯಾವರ ನದಿ ಸೇರಿದಂತೆ ಬಹುತೇಲ ಎಲ್ಲ ನದಿ-ತೊರೆಗಳು ಅಪಾಯದ ಮಟ್ಟ ಮೀರಿ ಹರಿಯತೊಡಗಿದೆ. ನಿರಂತರ ಮಳೆ ಮುಂದುವರಿದರೆ ನದಿ ತೀರಾ ಪ್ರದೇಶಗಳು ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಇದ್ದು ನಿವಾಸಿಗಳು ಎಚ್ಚರಿಕೆಯಿಂದಿರಬೇಕಾಗಿದೆ.

ಶಾಲಾ-ಕಾಲೇಜಿಗೆ ರಜೆ:

ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರಿದಿದ್ದು ತಗ್ಗು ಪ್ರದೇಶಗಳಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳವಾರ (ಜುಲೈ 9 ) ಜಿಲ್ಲಾದ್ಯಂತ ಅಂಗನವಾಡಿ , ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿರುವ ಕಾರಣ ಮಳೆ ತೀವ್ರವಾದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರು ಸಂಪೂರ್ಣ ಜಿಲ್ಲೆಗೆ ಅನ್ವಯಿಸಿ ಸೋಮವಾರ ರಜೆ ಘೋಷಣೆ ಮಾಡಿದ್ದಾರೆ.

ಪದವಿ, ಸ್ನಾತಕೋತ್ತರ, ಡಿಪ್ಲೋಮಾ ಮತ್ತು ಐಟಿಐ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವುದಿಲ್ಲ.

ಇನ್ನು ಐದು ದಿನ ಭಾರೀ ಮಳೆ: 

ಇನ್ನು ಐದು ದಿನ ಭಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸಹಾಯವಾಣಿ:

ಪ್ರಾಕೃತಿಕ ವಿಕೋಪ ಸಂಬಂಧಿಸಿ ಜಿಲ್ಲಾಡಳಿತದ ಹೆಲ್ಪ್ ಲೈನ್ 1077, 0820 – 2574802 ಸಂಪರ್ಕಿಸಲು ಜಿಲ್ಲಾಡಳಿತ ಸೂಚಿಸಿದೆ.

Latest Indian news

Popular Stories