ಬಡವರ ಮತ್ತು ಮಧ್ಯಮ ವರ್ಗದವರಿಗೆ ನೆರವು ವಿಎಸ್‍ಕೆ ವಿವಿಯ ಅತಿಥಿ ಗೃಹದಲ್ಲಿ 50 ಹಾಸಿಗೆಯ ಕೋವಿಡ್ ಕೇರ್ ಐಸೋಲೇಶನ್ ಕೇಂದ್ರ ಪ್ರಾರಂಭ:ಪ್ರೊ.ಸಿದ್ದು ಪಿ.ಅಲಗೂರ

ವಿಎಸ್‍ಕೆ ವಿವಿಯ ಅತಿಥಿ ಗೃಹದಲ್ಲಿ 50 ಹಾಸಿಗೆಯ ಕೋವಿಡ್ ಕೇರ್ ಐಸೋಲೇಶನ್ ಕೇಂದ್ರ ಪ್ರಾರಂಭ:ಪ್ರೊ.ಸಿದ್ದು ಪಿ.ಅಲಗೂರ
ಬಳ್ಳಾರಿ,ಮೇ04(ಕರ್ನಾಟಕ ವಾರ್ತೆ): ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ಮತ್ತು ಸೇವಾ ಭಾರತಿ ಸಹಯೋಗದಲ್ಲಿ ಬಡವರು ಮತ್ತು ಮಧ್ಯಮ ವರ್ಗದ ಕೋವಿಡ್ ರೋಗಿಗಳಿಗೆ ಐಸೋಲೇಶನ್ ಮತ್ತು ಕೋವಿಡ್ ಚಿಕಿತ್ಸೆ ನೀಡುವ ಉದ್ದೇಶದಿಂದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ 50 ಹಾಸಿಗೆಗಳ ಕೋವಿಡ್ ಕೇರ್ ಐಸೋಲೇಶನ್ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ವಿವಿಯ ಕುಲಪತಿ ಪ್ರೊ.ಸಿದ್ದು ಪಿ.ಅಲಗೂರು ತಿಳಿಸಿದರು.
ವಿವಿಯ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ಅನುಮತಿ ಪಡೆದು ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ಮತ್ತು ಸೇವಾ ಭಾರತಿ ಸಹಯೋಗದಲ್ಲಿ ವಿವಿಯ ಅತಿಥಿ ಗೃಹದಲ್ಲಿ 50 ಹಾಸಿಗೆಯೊಂದಿಗೆ ಕೋವಿಡ್ ಕೇರ್ ಐಸೋಲೇಶನ್ ಪ್ರಾರಂಭಿಸಲಾಗಿದೆ. ಮನೆಯಲ್ಲಿ ಸೂಕ್ತ ರೀತಿಯಾಗಿ ಐಸೋಲೇಶನ್‍ನಲ್ಲಿ ಇರಲು ಸಾಧ್ಯವಾಗದಂತ ಕೋವಿಡ್ ರೋಗಿಗಳಿಗೆ ಐಸೋಲೇಶನ್ ಕೇಂದ್ರ ನೆರವಾಗಲಿದೆ. ಇಲ್ಲಿ ಸಂಪೂರ್ಣವಾಗಿ ಮನೆಯ ವಾತಾವರಣ ನಿರ್ಮಾಣ ಮಾಡಲಾಗುತ್ತದೆ ಎಂದು ವಿವರಿಸಿದ ಅವರು ಯಾವುದೇ ರೀತಿಯ ಆಕ್ಸಿಜನ್, ವೆಂಟಿಲೇಟರ್,ಐಸಿಯು ಹಾಸಿಗೆ ಇರುವುದಿಲ್ಲ ಇದು ಕೇವಲ ಐಸೋಲೇಶನ್ ಕೇಂದ್ರವಷ್ಟೇ ಎಂದು ಮಾಹಿತಿ ನೀಡಿದರು.
ಐಸೋಲೇಶನ್ ಕೇಂದ್ರದಲ್ಲಿರುವ ಕೋವಿಡ್ ರೋಗಿಗಳಿಗೆ ಆರೋಗ್ಯದಲ್ಲಿ ಏರುಪೇರಾದರೆ ಜಿಲ್ಲಾಡಳಿತದ ಗಮನಕ್ಕೆ ತಂದು ಅವರ ಸೂಚನೆಯಂತೆ ಸೂಕ್ತ ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆಗೆ ಅವರನ್ನು ಸೇರಿಸುವ ಕೆಲಸ ಮಾಡಲಾಗುವುದು. ಐಸೋಲೇಶನ್ ಕೇಂದ್ರದಲ್ಲಿ ಎಲ್ಲಾ ರೀತಿಯ ಚಿಕಿತ್ಸೆ, ಔಷಧಿ ನೀಡುವುದರ ಜೊತೆಗೆ ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ರೋಗಿಗಳಿಗೆ ಆಹಾರ ಪೂರೈಸಲಾಗುತ್ತದೆ ಎಂದು ಅವರು ತಿಳಿಸಿದರು.
ಕೋವಿಡ್ ಪಾಸಿಟಿವ್ ವರದಿಯ ಜೊತೆಗೆ ವೈದ್ಯರ ಸೂಚನೆಯ ಮೇರೆಗೆ ಐಸೋಲೇಶನ್ ನಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲಿ ನುರಿತ ವೈದ್ಯರ ಜೊತೆಗೆ ಕೋವಿಡ್ ವಾರಿಯರ್ಸ್‍ಗಳಾಗಿ ಕಾರ್ಯನಿರ್ವಹಿಸುತ್ತಿರುವ ನರ್ಸ್‍ಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದಾರೆ. ರೋಗಿಗಳಿಗೆ ಪ್ರತಿದಿನ ನುರಿತ ಯೋಗಪಟುಗಳಿಂದ ಯೋಗ ಮಾಡಿಸಲಾಗುತ್ತದೆ. ರೋಗಿಗಳು ಮಾನಸೀಕ ಮತ್ತು ದೈಹಿಕವಾಗಿ ಶೀಘ್ರದಲ್ಲಿ ಚೇತರಿಸಿಕೊಳ್ಳುವ ನಿಮಿತ್ತ ಉತ್ತಮ ಪುಸ್ತಕಗಳನ್ನು ಮತ್ತು ಶಿಕ್ಷಣ, ಸೃಜನಶೀಲ ವೀಡಿಯೋಗಳನ್ನು ತೋರಿಸುವ ಮೂಲಕ ಕೋವಿಡ್ ರೋಗಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತದೆ ಎಂದು ವಿವರಿಸಿದರು.
ಕೋವಿಡ್ ಕೇರ್ ಐಸೋಲೇಶನ್ ಕೇಂದ್ರಕ್ಕೆ ನೋಡೆಲ್ ಮತ್ತು ಸಹಾಯಕ ನೋಡೆಲ್ ಅಧಿಕಾರಿಗಳಾಗಿ ವಿವಿಯ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್(ಜೀತೋ) ಅಧ್ಯಕ್ಷ ಸಿ.ಎ.ವಿನೋದ್ ಬಗ್ರಿಚಾ, ಮುಖ್ಯ ಕಾರ್ಯದರ್ಶಿ ವಿಮಲ್ ಜೈನ್, ಸಿಸಿಬಿ ಮಹಾವೀರ್ ಭೂರತ್, ಬೋರ್ಡ್ ಮೆಂಬರ್ ಕೈಲಾಸ್ ಜೈನ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಂಟಿ ಕಾರ್ಯದರ್ಶಿ ಪ್ರಸನ್ನಾಜಿ ಸೇರಿದಂತೆ ಮುಖಂಡರಾದ ಸತೀಶ್ ಕುಮಾರ್, ನರೇಶ್ ಚಿನರಾಯಿ, ಡಾ.ವಿಜಯ್ ಭಾಸ್ಕರ್ ರೆಡ್ಡಿ, ರಾಘವೇಂದ್ರ ಅವರು ಇದ್ದರು.

Latest Indian news

Popular Stories