ಬ್ಲ್ಯಾಕ್ಫಂಗಸ್ ಪ್ರಕರಣ ಇಳಿಮುಖ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸಾಂಕ್ರಾಮಿಕ ರೋಗದ ಜೊತೆ ಜೊತೆಗೆ ಬ್ಲ್ಯಾಕ್ ಫಂಗಸ್ ಅಬ್ಬರ ಕೂಡ ಇಳಿಕೆಯಾಗುತ್ತಿದೆ.
ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ವೇಳೆ ಒಟ್ಟಾರೆ 3,381 ಕೇಸ್ ಪತ್ತೆಯಾಗಿದ್ದು, 281 ಮಂದಿ ಸಾವನ್ನಪ್ಪಿದ್ದಾರೆ. ಈ 3,381 ಪ್ರಕರಣಗಳಲ್ಲಿ ಬೆಂಗಳೂರು ಒಂದರಲ್ಲಿಯೇ 1,068 ಕೇಸ್ ಪತ್ತೆಯಾಗಿದ್ದು, 87 ಮಂದಿ ಮೃತಪಟ್ಟಿದ್ದರು.
ದೈನಂದಿನ ಕೊರೋನಾ ಸೋಂಕು ಇಳಿಕೆಯಾಗುತ್ತಿರುವ ನಡುವಲ್ಲೇ ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ ಕೂಡ ಇಳಿಕೆಯಾಗುತ್ತಿದೆ ಎಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಕರ್ತವ್ಯನಿರ್ವಹಿಸುತ್ತಿರುವ ವೈದ್ಯರು ಹೇಳಿದ್ದಾರೆ.
ಈ ನಡುವೆ ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಸೋಂಕಿನ ಚಿಕಿತ್ಸೆಗೆ ನೀಡಲಾಗುವ ಆಂಫೊಟೆರಿಸಿನ್-ಬಿ ಔಷಧಿ ದಾಸ್ತಾನು ಸಾಕಷ್ಟಿದೆ ಎಂದು ಹೇಳಲಾಗುತ್ತಿದೆ.
ಮ್ಯೂಕೋರ್‌ಮೈಕೋಸಿಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರತಿದಿನ ಕೇವಲ 1-2 ಪ್ರಕರಣಗಳಷ್ಟೇ ಕಂಡು ಬರುತ್ತಿದ್ದು, ಈ ಹಿಂದೆ ಈ ಸಂಖ್ಯೆ ಹೆಚ್ಚಾಗಿತ್ತು ಎಂದು ಮೂಲಗಳು ಮಾಹಿತಿ ನೀಡಿವೆ.
ರಾಜ್ಯದಲ್ಲಿ ಮ್ಯೂಕೋರ್‌ಮೈಕೋಸಿಸ್ ಪ್ರಕರಣಗಳ ಸಂಖ್ಯೆ ಶೇ.50ರಷ್ಟು ಇಳಿಕೆಯಾಗಿದೆ. ನಮ್ಮಲ್ಲಿ ಇಎನ್‌ಟಿ ವೈದ್ಯರು, ನರಶಸ್ತ್ರಚಿಕಿತ್ಸಕರು, ನೇತ್ರಶಾಸ್ತ್ರಜ್ಞರು, ಫೇಶಿಯೊ-ಮ್ಯಾಕ್ಸಿಲ್ಲರಿ ಶಸ್ತ್ರಚಿಕಿತ್ಸಕರು ಮತ್ತು ಇತರೆ ವೈದ್ಯರ ತಂಡವಿದ್ದು, ಈ ವರೆಗೂ 100 ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ಇಎನ್‌ಟಿ ವಿಭಾಗದ ಮುಖ್ಯಸ್ಥ ಹಾಗೂ ಪ್ರೊಫೆಸರ್ ಡಾ.ವಿಶ್ವನಾಥ್ ಅವರು ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಸಂಭವಿಸುವ ಪ್ರತೀ ಸಾವಿನ ಕಾರಣಗಳ ಕುರಿತು ಚರ್ಚೆ ನಡೆಸಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಭೆ ನಡೆಸಲಾಗುತ್ತಿದ್ದು, ಬ್ಲ್ಯಾಕ್ ಫಂಗಸ್ ಗಿಂತಲೂ ಕೋವಿಡ್ ನಿಂದಾಗಿಯೇ ಹೆಚ್ಚಿನ ಜನರು ಸಾವನ್ನಪ್ಪುತ್ತಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ.
ಬ್ಲ್ಯಾಕ್ ಫಂಗಸ್ ಸೋಂಕಿಗೊಳಗಾದ ವ್ಯಕ್ತಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡದೇ ಹೋದಲ್ಲಿ ಸೋಂಕು ಮಿದುಳಿಗೆ ತಲುಪಿ ಸಾವು ಸಂಭವಿಸುವ ಸಾಧ್ಯತೆಗಳಿಸುತ್ತವೆ. ಸಾವಿನ ಸಂಖ್ಯೆ ಹೆಚ್ಚಾಗುತ್ತದೆ. ವಿಕ್ಟೋರಿಯಾ ಆಸ್ಪತ್ರೆಗೆ ಈ ವರೆಗೂ ದಾಖಲಾದ ಶೇ.90ರಷ್ಟು ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಪೊಸಕೊನಜೋಲ್ ಎಂಬ ಪರ್ಯಾಯ ಔಷಧಿಯನ್ನು ನೀಡಿ ಚಿಕಿತ್ಸೆ ನೀಡಲಾಗುತ್ತಿದೆ. ಮಧುಮೇಹ ನಿಯಂತ್ರಣದಲ್ಲಿರುವAತೆ ಮಾಡಿ, ದೀರ್ಘಕಾಲದವರೆಗಿನ ಆಂಟಿ ಫಂಗಸ್ ಔಷಧಿಗಳನ್ನು ನೀಡುವುದರಿಂದ ರೋಗಿ ಸಂಪೂರ್ಣವಾಗಿ ಚೇತರಿಸಿಕೊಳ್ಳುವಂತೆ ಮಾಡಬಹುದು ಎಂದು ತಿಳಿಸಿದ್ದಾರೆ.
ಪ್ರಸ್ತುತ ಆಸ್ಪತ್ರೆಗೆ ಪ್ರತೀನಿತ್ಯ 2-3 ಬ್ಲ್ಯಾಕ್ ಫಂಗಸ್ ಸೋಂಕಿತರು ದಾಖಲಾಗುತ್ತಿದ್ದಾರೆ. ಆಂಫೊಟೆರಿಸಿನ್-ಬಿ ಔಷಧಿ ಸೂಕ್ತ ರೀತಿಯಲ್ಲಿ ಸರಬರಾಜಾಗುತ್ತಿದೆ. ಸಾವಿನ ಪ್ರಮಾಣ ಇಳಿಕೆಯಾಗಿದೆ. ಟ್ರಸ್ಟ್ವೆಲ್ ಆಸ್ಪತ್ರೆಯಿಂದ ಶಿಫಾರಸ್ಸಗೊಂಡ ಬಹುತೇಕ ಮಂದಿ ಬೌರಿಂಗ್ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆಂದು ಬೌರಿಂಗ್ ಆಸ್ಪತ್ರೆ ಮತ್ತು ಕಾಲೇಜಿನ ನಿರ್ದೇಶಕ ಡಾ.ಮನೋಜ್ ಕುಮಾರ್ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪತ್ತೆಯಾಗಿರುವ 1,068 ಕೇಸ್ ಗಳಲ್ಲಿ 201 ಪ್ರಕರಣಗಳು ವಿಕ್ಟೋರಿಯಾ ಆಸ್ಪತ್ರೆ, 310 ಬೌರಿಂಗ್ ಆಸ್ಪತ್ರೆ, 3 ಕೆಸಿ ಜನರಲ್ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದು, ಇನ್ನುಳಿದ ಪ್ರಕರಣಗಳು ನಗರದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಪತ್ತೆಯಾಗಿವೆ.

Latest Indian news

Popular Stories

error: Content is protected !!