ಪ್ರಯಾಣಿಕರಿಗೆ ಲಸಿಕೆ ಕಡ್ಡಾಯಗೊಳಿಸಿದ ಮಹಾರಾಷ್ಟ್ರ

ಮುಂಬೈ: ಮಹಾರಾಷ್ಟ್ರಕ್ಕೆ ಭೇಟಿ ನೀಡಲು ಕೋವಿಡ್ -19 ಲಸಿಕೆಯ ಎರಡು ಡೋಸ್ ಪಡೆದಿರುವುದನ್ನು ಮಹಾರಾಷ್ಟ್ರ ಸರಕಾರ ಕಡ್ಡಾಯಗೊಳಿಸಿದೆ. ಆದರೆ, ನೆಗೆಟಿವ್ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯಿಂದ ವಿನಾಯಿತಿ ನೀಡಲಾಗಿದೆ.
ಗುರುವಾರ ತಡರಾತ್ರಿ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಈ ಆದೇಶವನ್ನು ಹೊರಡಿಸಿದ್ದಾರೆ. ರಾಜ್ಯಕ್ಕೆ ಭೇಟಿ ನೀಡುವವರು ಕೋವಿಡ್-19 ಲಸಿಕೆಯ ಎರಡು ಡೋಸ್ ಗಳನ್ನು ಪಡೆದಿರಬೇಕು, ಎರಡನೇ ಡೋಸ್ ಪಡೆದು 15 ದಿನಗಳ ಅಂತರವಿರಬೇಕು. ಅಂತಹ ವ್ಯಕ್ತಿಯು ಕೋವಿನ್ ಪೋರ್ಟಲ್ ಮೂಲಕ ನೀಡುವ ಅಂತಿಮ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಹೊಂದಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಲಸಿಕೆ ಪಡೆದವರು ನೆಗೆಟಿವ್ ಆರ್ ಟಿ- ಪಿಸಿಆರ್ ವರದಿಯನ್ನು ತೋರಿಸಬೇಕಾದ ಅಗತ್ಯವಿರುವುದಿಲ್ಲ. ಇದು ದೇಶಿಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಅನ್ವಯವಾಗಲಿದೆ ಎಂದು ಹೇಳಲಾಗಿದೆ.
ಈ ವಿನಾಯಿತಿ ಆದೇಶದ ಹೊರತಾಗಿಯೂ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಎಲ್ಲಾ ವೇಳೆಯಲ್ಲೂ ಪಾಲಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಇತರ ಎಲ್ಲ ವ್ಯಕ್ತಿಗಳಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯ ಮಾನ್ಯತೆಯು 48 ಗಂಟೆಗಳ ಬದಲು 72 ಗಂಟೆಗಳಿರುತ್ತದೆ ಎಂದು ಅದು ಹೇಳಿದೆ.

Latest Indian news

Popular Stories