ಜಿಲ್ಲೆಯಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಕೊರೊನಾ ಆರೈಕೆ ಕೇಂದ್ರ ತೆರೆಯಲು ಕ್ರಮ: ಸಚಿವರಾದ ಪ್ರಭು ಚವ್ಹಾಣ್

ಬೀದರ (ಕರ್ನಾಟಕ ವಾರ್ತೆ): ಬೀದರ ಜಿಲ್ಲೆಯಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಆಕ್ಸಿಜನ್ ಸೌಲಭ್ಯವುಳ್ಳ ಕೊರೊನಾ ಆರೈಕೆ ಕೇಂದ್ರಗಳನ್ನು ತೆರೆಯುವಂತೆ ಅಧಿಕಾರಿಗಳಿಗೆ ಸೂಚಿಸಿ ಕ್ರಮ ವಹಿಸಲಾಗುತ್ತಿದೆ ಎಂದು ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೇ.17ರಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೊರೋನಾ ಎರಡನೇ ಅಲೆಯು ಮುಕ್ತಾಯದ ಹಂತದಲ್ಲಿದ್ದು, ಮುಂಬರಲಿರುವ ಮೂರನೇ ಅಲೆಗೂ ಈಗಿನಿಂದಲೇ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲು ತಾವು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಮತ್ತು ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾಗಿ ಸಚಿವರು ಹೇಳಿದರು.
ಗ್ರಾಮೀಣ ಭಾಗದ ಸೋಂಕಿತರಿಗೆ ಸುಲಭವಾಗಿ ಚಿಕಿತ್ಸೆ ಲಭ್ಯವಾಗಲು ತಾಲ್ಲೂಕು ಆಸ್ಪತ್ರೆಗಳಲ್ಲಿಯೂ ಆಕ್ಸಿಜನ್‌ಯುಕ್ತ ಹಾಸಿಗೆ ವೆಂಟಿಲೇಟರ್‌ಗಳನ್ನು ಅಳವಡಿಸಲಾಗುತ್ತಿದೆ ಎಂದರು.
ಬೀದರ ಜಿಲ್ಲೆಯಲ್ಲಿ ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಪ್ರಸ್ತುತ ರೋಗಿಗಳನ್ನು ಪತ್ತೆ ಹಚ್ಚುವುದು ಅನಿವಾರ್ಯವಾಗಿದ್ದು, ಹೀಗಾಗಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಲು ತಿಳಿಸಲಾಗಿದೆ.
ಹುಮನಾಬಾದ ತಾಲ್ಲೂಕುಗಳಲ್ಲಿ ಆಂಬ್ಯುಲೆನ್ಸ್ಗಳ ಕೊರತೆಯಿದೆ ಎಂಬ ವಿಷಯ ಗಮನಕ್ಕೆ ಬರುತ್ತಿದ್ದಂತೆ ಇಲ್ಲಿನ ಆಸ್ಪತ್ರೆಗಳಿಗೆ ಆಂಬ್ಯುಲೆನ್ಸ್ಗಳನ್ನು ಕಳುಹಿಸಲಾಗಿದೆ. ಚಿಟಗುಪ್ಪಾ ತಾಲ್ಲೂಕಿನಲ್ಲಿ ಸೋಂಕು ನಿಯಂತ್ರಣಕ್ಕಾಗಿ ಹೊಸ ತಾಲ್ಲೂಕು ಆರೋಗ್ಯಾಧಿಕಾರಿಯನ್ನು ನೇಮಕಾತಿ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಮೇ 17ರಂದು ಹೊಸದಾಗಿ 174 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 378 ಜನರು ಬಿಡುಗಡೆಯಾಗಿದ್ದಾರೆ. ನಾಲ್ವರು ನಿಧನರಾಗಿದ್ದಾರೆ. ಹೊಸದಾಗಿ 38 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಟ್ಟು ಪ್ರಕರಣಗಳು 22,915, ಆಕ್ಟೀವ್ ಕೇಸಸ್ 2133., ಹೋಮ್ ಐಸೋಲೇಶನ್ 1090., ಆಸ್ಪತ್ರೆಯಲ್ಲಿ ದಾಖಲಿರುವವರು 1043 ಎಂದು ಸಚಿವರು ಮಾಹಿತಿ ನೀಡಿದರು.
ನಾಲ್ಕು ತಾಲೂಕು ಆಸ್ಪತ್ರೆಗಳಿಗೆ ತಲಾ 50 ರಂತೆ 200 ಜಂಬೋ ಸಿಲಿಂಡರಗಳನ್ನು ಸರಬರಾಜು ಮಾಡಿರುವುದಾಗಿ ಸಚಿವರು ಮಾಹಿತಿ ನೀಡಿದರು. ಬ್ರಿಮ್ಸನಲ್ಲಿ ಅಗತ್ಯ ಪ್ರಮಾಣದಲ್ಲ ಆಕ್ಸಿಜನ್ ಲಭ್ಯ ಇದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್., ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಇದ್ದರು.

Latest Indian news

Popular Stories