Crime

2ಎ ಮೀಸಲಾತಿ: ದಾವಣಗೇರೆಯಲ್ಲಿ ಬಾರಕೋಲು ಚಳುವಳಿ

ದಾವಣಗೆರೆ,ಜ.30:- ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ದಾವಣಗೆರೆಯಲ್ಲಿ ಬಾರಕೋಲು ಚಳವಳಿ ಶನಿವಾರ ಆರಂಭಗೊಂಡಿದೆ.
ಅರುಣಾ ಟಾಕೀಸ್ ಎದುರಿನ ಸರ್ಕಲ್‍ಗೆ ಕಿತ್ತೂರು ರಾಣಿ ಚನ್ನಮ್ಮ ಎಂದು ನಾಮಕರಣ ಮಾಡಲಾಗಿದ್ದು, ಚನ್ನಮ್ಮ ನಾಮಫಲಕಕ್ಕೆ ಬಸವಜಯಮೃತ್ಯುಂಜಯ ಸ್ವಾಮೀಜಿ ಮತ್ತು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮಾಲಾರ್ಪಣೆ ಮಾಡಿದರು. ಉಳುಮೆಯ ಸಂದರ್ಭದಲ್ಲಿ ಎತ್ತುಗಳನ್ನು ನಿಯಂತ್ರಿಸಲು ಬಳಸುವ ಬಾರುಕೋಲುಗಳನ್ನು ಹಿಡಿದು ಬಳಿಕ ಪಾದಯಾತ್ರೆ ಆರಂಭಿಸಿದರು.
ಜ.14ರಿಂದ ಇಲ್ಲಿವರೆಗೆ 380ಕ್ಕೂ ಅಧಿಕ ಕಿಲೋಮೀಟರ್‍ಅನ್ನು ಪಾದಯಾತ್ರೆ ಮೂಲಕ ಕ್ರಮಿಸಿದ್ದೇವೆ. ಇಲ್ಲಿವರೆಗೆ ನಾನು ಒಂಟಿ ಸ್ವಾಮೀಜಿ ಆಗಿದ್ದೆ. ಇನ್ನುಮುಂದಿನ ಪಾದಯಾತ್ರೆ ಉಭಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುತ್ತದೆ. ಸಮುದಾಯದಲ್ಲಿ ಒಗ್ಗಟ್ಟಿಲ್ಲ ಎಂಬ ತಪ್ಪು ಕಲ್ಪನೆ ಎಲ್ಲರಲ್ಲಿ ಇತ್ತು. ನಾವು ಒಗ್ಗಟ್ಟಾಗಿ ಇದ್ದೇವೆ ಎಂಬ ಸಂದೇಶ ರವಾನೆಯಾಗಿದೆ. ಇಲ್ಲಿಯವರೆಗೆ ಶಾಂತಿ, ಸಹನೆ, ಪ್ರೀತಿಯಿಂದ 2ಎ ಮೀಸಲಾತಿ ನೀಡಿ ಎಂದು ಕೇಳಿದ್ದೆ. ಇನ್ನು ಮುಂದೆ ಶಾಂತಿಯಲ್ಲ, ಕ್ರಾಂತಿ ಮೂಲಕ ಕೇಳುತ್ತೇವೆ. ಆಗ್ರಹಪಡಿಸುತ್ತೇವೆ. ಕಲ್ಲಿನಕೋಟೆ ಚಿತ್ರದುರ್ಗಕ್ಕೆ ಪಾದಯಾತ್ರೆ ತಲುಪುವ ಮೊದಲು 2ಎ ಘೋಷಣೆ ಮಾಡಬೇಕು. ಇಲ್ಲದೇ ಹೋದರೆ ಪ್ರತಿಭಟನೆ ಇನ್ನಷ್ಟು ಉಗ್ರಗೊಳ್ಳಲಿದೆ’ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ.
ಪಂಚಮಸಾಲಿ ಸಮುದಾಯದ 17 ಮಂದಿ ಶಾಸಕರು ಇದ್ದಾರೆ. ನಾವು ಇಲ್ಲಿ ರಸ್ತೆಯಲ್ಲಿ ಹೋರಾಟ ಮಾಡುತ್ತಿದ್ದರೆ, ನೀವು ಅಧಿವೇಶನದಲ್ಲಿ ಹೋರಾಟ ಮಾಡಿ ಮೀಸಲಾತಿ ಕೊಡಿಸಬೇಕು. ನಿಮಗೆ ಆಗುವುದಿಲ್ಲ ಎಂದಾದರೆ ರಾಜೀನಾಮೆ ಕೊಟ್ಟು ಹೊರನಡೆಯಿರಿ. ನಾವು ಬೇರೆಯವರನ್ನು ಶಾಸಕರನ್ನಾಗಿ ಆಯ್ಕೆ ಮಾಡುತ್ತೇವೆ’ ಎಂದು ಕಿಡಿಕಾರಿದರು.
ವಚನಾನಂದ ಸ್ವಾಮೀಜಿ ಮಾತನಾಡಿ, ‘ನಮ್ಮಲ್ಲಿ ಯಾವುದೇ ಭೇದವಿಲ್ಲ. ಸಮುದಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಆ ಭಾಗದಲ್ಲಿ ಸಮಾಜದ ಉದ್ಧಾರಕ್ಕಾಗಿ ಜಯಮೃತ್ಯುಂಜಯ ಸ್ವಾಮೀಜಿ ಶ್ರಮಿಸುತ್ತಾರೆ. ಈ ಭಾಗದಲ್ಲಿ ಹರಿಹರ ಪೀಠ ಶ್ರಮಿಸುತ್ತದೆ. 2ಎ ಮೀಸಲಾತಿ ನಾವು ಕೇಳುತ್ತಿರುವ ಭಿಕ್ಷೆಯಲ್ಲ. ನಮ್ಮ ಹಕ್ಕು ಅದು ಎಂದು ಪ್ರತಿಪಾದಿಸಿದರು.
ಹೋರಾಟ ಸಮಿತಿಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ಬಿ.ಸಿ. ಉಮಾಪತಿ, ಹೋರಾಟದ ದಾವಣಗೆರೆಯ ಉಸ್ತುವಾರಿ ಎಚ್.ಎಸ್. ನಾಗರಾಜ್ ಅವರೂ ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button