
‘ವೈದ್ಯ ಕಂಡ ವಿಸ್ಮಯ’ ಪುಸ್ತಕ ಲೋಕಾರ್ಪಣೆ
ಮಡಿಕೇರಿ ಏ.೨೭ : ವೈದ್ಯನೊಬ್ಬ ಕಥೆಗಾರನಾಗಬಹುದು, ಸಾಹಿತಿಯಾಗಬಹುದು, ಆದರೆ ವೈದ್ಯ ಲೋಕದಲ್ಲಿ ತಾನು ಅನುಭವಿಸಿದ ಘಟನಾವಳಿಗಳಿಗೆ ನಿಗೂಢ, ವಿಸ್ಮಯ, ಕುತೂಹಲ, ರೋಮಾಂಚನದ ಹೂರಣವನ್ನು ತುಂಬಿ ಪುಸ್ತಕದ ರೂಪದಲ್ಲಿ ಹೊರ ತರುವವರು ಬಹಳ ಅಪರೂಪ.
ಮಡಿಕೇರಿಯ ಹಿರಿಯ ವೈದ್ಯ ಡಾ.ಕೆ.ಬಿ.ಸೂರ್ಯಕುಮಾರ್ ಅವರು ತಮ್ಮ ಚೊಚ್ಚಲ ಪುಸ್ತಕ ‘ವೈದ್ಯ ಕಂಡ ವಿಸ್ಮಯ’ದ ಮೂಲಕ ಓದುಗರ ಮುಂದೆ ವಿಸ್ಮಯ ಲೋಕವನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾವು, ಬದುಕು, ಕೊಲೆ, ಅಪರಾಧ, ಅನ್ಯಾಯ, ಅನಾರೋಗ್ಯ, ಸಂಚು ಹೀಗೆ ಅನೇಕ ನಿಗೂಢತೆಗಳನ್ನು ಕುತೂಹಲಕಾರಿಯಾಗಿ ಬರೆದಿದ್ದಾರೆ.
ಓದುಗರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವ ‘ವೈದ್ಯ ಕಂಡ ವಿಸ್ಮಯ’ ಪುಸ್ತಕವನ್ನು ‘ಶಕ್ತಿ’ ದಿನಪತ್ರಿಕೆಯ ಸಂಪಾದಕ ಬಿ.ಜಿ.ಅನಂತಶಯನ ಅವರು ಮಡಿಕೇರಿಯಲ್ಲಿ ಲೋಕಾರ್ಪಣೆಗೊಳಿಸಿದರು.
ಪುಸ್ತಕದೊಳಗಿನ ನಿಗೂಢತೆಯನ್ನು ಕೊಂಡಾಡಿದ ಅವರು ಹಿರಿಯ ವೈದ್ಯ ಡಾ.ಕೆ.ಬಿ.ಸೂರ್ಯಕುಮಾರ್ ಅವರೊಳಗೊಬ್ಬ ಕವಿ ವಿಜೃಂಭಿಸುತ್ತಿದ್ದಾನೆ ಎಂದು ಶ್ಲಾಘಿಸಿದರು.
ಡಾ.ಕೆ.ಬಿ.ಸೂರ್ಯಕುಮಾರ್ ತಮ್ಮ ಪುಸ್ತಕದ ಬಗ್ಗೆ ವಿವರಿಸಿದರು. ಕೋವಿಡ್ ಮಾರ್ಗಸೂಚಿ ಹಿನ್ನೆಲೆ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಸರಳವಾಗಿ ನಡೆಯಿತು. ಫೋಟೋ :: ಬುಕ್




