Crime

ಬಳ್ಳಾರಿ: ಮೆಕ್ಕೆಜೋಳ ಬೆಳೆಗೆ ಫಾಲ್ ಸೈನಿಕ ಹುಳು:ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಿ

ಬಳ್ಳಾರಿ, ಅ 07: ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆಗೆ ಫಾಲ್ ಸೈನಿಕ ಹುಳು (Fall Army Worm, Spodoptera frugiperda) ಎಂಬ ಕೀಟದ ಹಾವಳಿಯು ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಕಂಡುಬಂದಿದ್ದು ಈ ಕೀಟ ಕಂಡುಬಂದಿರುವ ಬೆಳೆಗಳ ರಕ್ಷಣೆ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶರಣಪ್ಪ ಮದಗಲ್ ಅವರು ವಿವರಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ಕೀಟವು ಪ್ರಮುಖವಾಗಿ ಮೆಕ್ಕೆ ಜೋಳದ ಪೀಡೆಯಾಗಿದ್ದು, ಭತ್ತ, ಜೋಳ, ಹತ್ತಿ ಮತ್ತು ಕೆಲವು ತರಕಾರಿ ಬೆಳೆಗಳನ್ನು ಸಹ ಹಾನಿಮಾಡುತ್ತದೆ. ಮೋಡದ ವಾತಾವರಣ, ಹೆಚ್ಚಿನ ಮಳೆ, ವಾತಾವರಣದಲ್ಲಿ ಹೆಚ್ಚಿನ ತೇವಾಂಶ ಮತ್ತು ಕಡಿಮೆ ಉಷ್ಣಾಂಶವಿದ್ದಲ್ಲಿ ಇದರ ಹಾವಳಿ ಹೆಚ್ಚಾಗಿರುತ್ತದೆ. ಮುಂಚಿತವಾಗಿ ಬಿತ್ತನೆಯಾದ ಪ್ರದೇಶದಲ್ಲಿ ಇದರ ಹಾವಳಿ ಕಡಿಮೆ ಇದ್ದು, ತಡವಾಗಿ ಬಿತ್ತನೆಯಾದ ಪ್ರದೇಶದಲ್ಲಿ ಇದರ ಹಾವಳಿ ಕಂಡುಬರುತ್ತಿದ್ದು, ನೀರಾವರಿ ಮೆಕ್ಕೆಜೋಳದಲ್ಲಿ ಇದರ ಹಾನಿ ಹೆಚ್ಚಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೀಟದ ಜೀವನ ಚಕ್ರ : ಈ ಕಿಟವು ಮೊಟ್ಟೆಗಳನ್ನು ಗುಂಪಾಗಿ ಇಡುತ್ತಿದ್ದು, ಒಂದು ಹೆಣ್ಣು ಪತಂಗವು ಸುಮಾರು 900-1500 ಮೊಟ್ಟೆಗಳನ್ನು ಇಡುತ್ತದೆ. ಮರಿ ಹುಳದ ಜೀವಿತಾವಧಿ ಸುಮಾರು 20 ದಿನವಾಗಿದ್ದು, ಒಂದು ತಿಂಗಳಿನಲ್ಲಿ ತನ್ನ ಜೀವನ ಚಕ್ರವನ್ನು ಮುಗಿಸುತ್ತದೆ.
ಬೆಳೆ ಹಾನಿಯ ಲಕ್ಷಣ : ಈ ಕೀಟವು ಮುಖ್ಯವಾಗಿ ಮೆಕ್ಕೆಜೋಳದ ಸುರಳಿಯಲ್ಲಿ ಅತಿ ಹೆಚ್ಚು ಹಾನಿಯನ್ನು ಉಂಟುಮಾಡುತ್ತದೆ. ಮೊದಲೆರಡು ಹಂತದ ಮರಿಹುಳುಗಳಿಂದ ಹೊರಬರುವ ಎಲೆಗಳ ಮೇಲೆ ರಂಧ್ರಗಳನ್ನು ಕಾಣಬಹುದು. ಮೂರನೆ ಮತ್ತು ನಂತರ ಹಂತದ ಹುಳುಗಳು ಎಲೆಗಳ ಅಂಚನ್ನು ತಿನ್ನುವುದರಿಂದ, ಎಲೆಗಳು ಹರಿದಂತೆ ಕಾಣುತ್ತದೆ.
ಈ ಕೀಟವನ್ನು ನಿಯಂತ್ರಿಸಲು ರೈತರು ಬೆಳೆಗೆ ಕೈಗೊಳ್ಳ ಬೇಕಾದ ಕ್ರಮಗಳು; ದೊಡ್ಡ ಹಂತದ ಮರಿಹುಳುಗಳು ಕಂಡುಬಂದರೆ ಕೈಯಿಂದ ಆರಿಸಿ ನಾಶಪಡಿಸಬೇಕು. ಜೈವಿಕ ಶೀಲೀಂದ್ರ ಕೀಟನಾಶಕ ಗಳಾದ ನೊಮೊರಿಯಾ ರಿಲೈ ಅಥವಾ ಮೆಟಾರೈಜಿಯಮ್ ಅನಿಸೋಪ್ಲಿಯೆಯನ್ನು ಪ್ರತಿ ಲೀ. ನೀರಿಗೆ 2 ಗ್ರಾಂ ಬೆರೆಸಿ ಸಿಂಪಡಿಸಬೇಕು. ಹೊಲದಲ್ಲಿ ದೀಪಾಕರ್ಷಕ ಬಲೆಗಳನ್ನು ಅಲ್ಲಲ್ಲಿ ಅಳವಡಿಸಿ ಪತಂಗಗಳನ್ನು ಆಕರ್ಷಿಸಿ ನಾಶಪಡಿಸಬಹುದು.
ರೈತರು ಮೋನೊಕ್ರೊಟೋಫಾಸ್ ವಿಷ ಪಾಷಾಣವನ್ನು ತಯಾರಿಸಿ ಮೆಕ್ಕೆಜೋಳದ ಸುಳಿಗೆ ಹಾಕಬೇಕು. ವಿಷಪಾಷಾಣವನ್ನು ತಯಾರಿಸಲು 2 ಕೆ.ಜಿ. ಬೆಲ್ಲವನ್ನು ಪುಡಿಮಾಡಿ 4 ಲೀ. ನೀರಿನಲ್ಲಿ ಕರಗಿಸಿ 250 ಮಿ.ಲೀ. ಮೋನೊಕ್ರೊಟೋಫಾಸ್ 36 ಎಸ್.ಎಲ್. ಕೀಟನಾಶಕವನ್ನು ಸೇರಿಸಿದ ಮೇಲೆ ಈ ಮಿಶ್ರಣವನ್ನು 20 ಕೆ.ಜಿ. ಭತ್ತ/ಗೋದಿ ತೌಡಿನಲ್ಲಿ ಬೆರೆಸಿ ಚೆನ್ನಾಗಿ ಕಲಸಿ ಗಾಳಿಯಾಡದಂತೆ 48 ಗಂಟೆಗಳ ಕಾಲ ಗೊಬ್ಬರದ ಚೀಲ ಅಥವಾ ಪ್ಲಾಸ್ಟಿಕ್ ಡ್ರಮ್ಮಿನಲ್ಲಿ ಮುಚ್ಚಿಟ್ಟು ಕಳಿಯಲು ಬಿಡಬೇಕು. ಈ ರೀತಿ ತಯಾರಿಸಿ ಪಾಷಾಣವನ್ನು ಮೆಕ್ಕೆಜೋಳದ ಸುಳಿಯಲ್ಲಿ ಹಾಕಬೇಕು ಎಂದು ಅವರು ತಿಳಿಸಿದ್ದಾರೆ.
ರಾಸಾಯನಿಕ ಕೀಟನಾಶಕಗಳಾದ ಸೈಪರ್‍ಮೆಥ್ರಿನ್ 10 ಇ.ಸಿ. @ 1 ಮಿ.ಲೀ. ಅಥವಾ ಕ್ಲೋರ್‍ಪೈರಿಫಾಸ್ 20 ಇ.ಸಿ. @ 2 ಮಿ.ಲೀ. ಅಥವಾ ಲ್ಯಾಮ್ಡಸೈಹ್ಯಾಲೊಥ್ರಿನ್ 5 ಇ.ಸಿ. @ 1 ಮಿ.ಲೀ. ಅಥವಾ ಇಮಾಮೆಕ್ಟಿನ್ ಬೆಂಜೋಯೇಟ್ 5 ಎಸ್.ಜಿ. @ 0.4 ಗ್ರಾಂ. ಅಥವಾ ಸ್ಪೈನೋಸ್ಯಾಡ್ 45 ಎಸ್.ಸಿ. @ 0.2 ಮಿ.ಲೀಟರನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಈ ಕೀಟಗಳ ಹಾವಳಿಯನ್ನು ನಿಯಂತ್ರಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button