
ಬಸವಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿಗೆ ಬುದ್ದಿ ಕಲಿಸುತ್ತೇವೆ..
ಬೀದರ್: ಬಸವಕಲ್ಯಾಣ ಉಪಚುನಾವಣೆಯಲ್ಲಿ ಬಿಜೆಪಿ ನಾಯಕರು ಹೊರಗಿನವರಿಗೆ ಟಿಕೆಟ್ ನೀಡಿರುವುದು ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರನ್ನು ಕೆರಳಿಸಿದೆ. ಶುಕ್ರವಾರ ಸಂಸದ ಖೂಬಾ ಅವರ ಫೋಟೊಕ್ಕೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದ ಆಕಾಂಕ್ಷಿಗಳ ಬೆಂಬಲಿಗರು ಮತ್ತು ಕಾರ್ಯಕರ್ತರು ಶನಿವಾರವೂ ಹೈಕಮಾಂಡ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಬಿಜೆಪಿ ಟಿಕೆಟ್ ದಾವೇದಾರರಲ್ಲಿ ಒಬ್ಬರಾಗಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರ ನಿವಾಸದಲ್ಲಿ ಶನಿವಾರ ಬೆಳಗ್ಗೆ ಸ್ಥಳೀಯ ಮುಖಂಡರ ಮತ್ತು ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ಪಾಲ್ಗೊಂಡವರ ಪೈಕಿ ಹೆಚ್ಚಿನವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಮಲ್ಲಿಕಾರ್ಜುನ ಖೂಬಾ ಅವರನ್ನು ಒತ್ತಾಯಿಸಿದರು.
16 ಜನ ಮುಖಂಡರು ಬಿಜೆಪಿ ಟಿಕೆಟ್ ಕೇಳಿದ್ದರು. ಇವರಲ್ಲಿ ಒಬ್ಬರೂ ಅರ್ಹರಿರಲಿಲ್ಲವೇ, ಗೆಲ್ಲುವ ಶಕ್ತಿ ಯಾರಿಗೂ ಇದ್ದಿರಲಿಲ್ಲವೇ ಎಂದು ಕೆಲ ಮುಖಂಡರು ಪಕ್ಷದ ಹೈಕಮಾಂಡ್ಅನ್ನು ಪ್ರಶ್ನಿಸಿದರು.
ಹಲವು ವರ್ಷಗಳಿಂದ ಮುಖಂಡರು ಪಕ್ಷ ಕಟ್ಟಲು ಶ್ರಮಿಸುತ್ತಿದ್ದಾರೆ. ಮಾಜಿ ಶಾಸಕರು, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರು, ಜಿಪಂ ಸದಸ್ಯರು ಸೇರಿ 16 ಜನ ಸ್ಥಳೀಯ ಮುಖಂಡರು ಟಿಕೆಟ್ ಕೇಳಿದ್ದರು. ಈ 16 ಜನರ ಪೈಕಿ ಯಾರಾದರೊಬ್ಬರಿಗೆ ಟಿಕೆಟ್ ಕೊಡಬಹುದಾಗಿತ್ತು. ಸ್ಥಳೀಯರನ್ನು ನಿರ್ಲಕ್ಷಿಸಿ, ಹೊರಗಿನವರಿಗೆ ಟಿಕೆಟ್ ನೀಡಿರುವುದು ಬಸವಕಲ್ಯಾಣ ಜನತೆಗೆ ಮಾಡಿರುವ ಅಪಮಾನವಾಗಿದೆ ಎಂದು ಮುಖಂಡರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು. ಎಲ್ಲರೂ ಒಂದಾಗಿ ಖೂಬಾ ಅವರನ್ನು ಗೆಲ್ಲಿಸುತ್ತೇವೆ. ಈ ಬಾರಿ ಬಿಜೆಪಿಗೆ ಪಾಠ ಕಲಿಸುತ್ತೇವೆ ಎಂದು ಮುಖಂಡರೊಬ್ಬರು ಹೇಳಿದರು.
ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಮಾತನಾಡಿ, ಸ್ಥಳೀಯ ಮುಖಂಡರನ್ನು ನಿರ್ಲಕ್ಷಿಸಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 16 ಜನರ ಪೈಕಿ ಒಬ್ಬರಿಗೂ ಗೆಲ್ಲುವ ಶಕ್ತಿ ಇದ್ದಿರಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಹೈಕಮಾಂಡ್ ಇದಕ್ಕೆ ಉತ್ತರ ಕೊಡಬೇಕಾಗುತ್ತದೆ ಎಂದರು.
ಎಲ್ಲ 16 ಜನ ಆಕಾಂಕ್ಷಿಗಳು ಸೇರಿ ಈ ಕುರಿತು ಚರ್ಚಿಸುತ್ತೇವೆ. ದಿ. 30 ರವರೆಗೆ ವರಿಷ್ಠರ ಉತ್ತರಕ್ಕಾಗಿ ಕಾಯುತ್ತೇವೆ. ನಂತರ ಎಲ್ಲರೂ ಮತ್ತೊಮ್ಮೆ ಸಮಾಲೋಚನೆ ನಡೆಸಿ, ತೀರ್ಮಾನ ಕೈಗೊಳ್ಳುತ್ತೇವೆ ಎಂದು ಮಲ್ಲಿಕಾರ್ಜುನ ಖೂಬಾ ಹೇಳಿದರು.




